ಬೇಲೂರು
From Wikipedia
ಶಿಲಾಬಾಲಿಕೆಯರಿಗೆ ಪ್ರಸಿಧ್ಧವಾಗಿರುವ ಬೇಲೂರು ಹೊಯ್ಸಳ ರಾಜವಂಶದ ರಾಜಧಾನಿಯಾಗಿತ್ತು. ಹಳೇಬೀಡಿನೊಡನೆ ಇದನ್ನು ಕರ್ನಾಟಕದ ಮುಖ್ಯ ಪ್ರವಾಸಿಸ್ಥಳವೆಂದು ಪರಿಗಣಿಸಲಾಗುತ್ತದೆ. ಇಲ್ಲಿ ದೊರಕಿರುವ ಶಾಸನಗಳ ಪ್ರಕಾರ ಇದನ್ನು ವೇಲಾಪುರಿಯೆಂದು ಹೇಳಲಾಗುತ್ತಿತ್ತು. ಚನ್ನಕೇಶವಸ್ವಾಮಿಯ ದೇವಾಲಯವನ್ನು ಬೇಲೂರಿನ ಮುಖ್ಯ ಆಕರ್ಷಣೆಯೆನ್ನಬಹುದು.
ಚನ್ನಕೇಶವ ದೇವಾಲಯವು ಹೊಯ್ಸಳಶೈಲಿಯ ವಾಸ್ತುಶಿಲ್ಪದ ಪ್ರಮುಖ ಮತ್ತು ಶ್ರೇಷ್ಠ ಉದಾಹರಣೆ. ರಾಜಾ ವಿಷ್ಣುವರ್ಧನನು ತಲಕಾಡಿನ ದಳಪತಿಯ ಮೇಲಿನ ವಿಜಯೋತ್ಸವವನ್ನು ಆಚರಿಸುವ ಸಮಯವಾದ ೧೧೧೭ರಲ್ಲಿ ಈ ಕಟ್ಟಡದ ಕೆಲಸವನ್ನು ಪ್ರಾರಂಭಿಸಿದನೆಂದು ಕಂಡುಬರುತ್ತದೆ. ಇದನ್ನು ಪೂರ್ಣಗೊಳಿಸಲು ೧೦೩ ವರ್ಷಗಳೇ ಹಿಡಿದು ಇದನ್ನು ವಿಷ್ಣುವರ್ಧನನ ಮೊಮ್ಮಗನು ಪೂರ್ಣಗೊಳಿಸಿದನು. ಭಾರತೀಯ ಪುರಾಣಗಳು ಮತ್ತು ಮಹಾಕಾವ್ಯಗಳ ಚಿತ್ರಶಿಲ್ಪಗಳು ಇದರಲ್ಲಿ ತುಂಬಿವೆ. ಶ್ರವಣಬೆಳಗೊಳದ ಬಾಹುಬಲಿಯ ವಿರಾಟಮೂರ್ತಿಯನ್ನೂ ಸೇರಿಸಿ ಈ ಸಂಕೀರ್ಣಗಳನ್ನು ಯುನೆಸ್ಕೋ ವಿಶ್ವ ಸಂಸ್ಕೃತಿಯ ಪಟ್ಟಿಗೆ ಸೇರಿಸಿದ್ದಾರೆ.
ಕನ್ನಡದ ಮಹಾಕವಿ ಕುವೆಂಪು ಅವರು ಇಲ್ಲಿಯ ದೇವಾಲಯಗಳನ್ನು ನೋಡಿ "ಶಿಲೆಯಲ್ಲವೀ ಕಲೆಯಬಲೆಯು ಸೌಂದರ್ಯ ವಿಪ್ಲವದ ಪಲ್ಲವಿಯು" ಎಂದಿದ್ದಾರೆ.