ನಾಗರಹೊಳೆ ಅಭಯಾರಣ್ಯ
From Wikipedia
ಬೆಂಗಳೂರಿನಿಂದ ೨೩೬ ಕಿಲೋಮೀಟರ್ ಹಾಗೂ ಮೈಸೂರಿನಿಂದ ೯೬ ಕಿಲೋಮೀಟರ್ ದೂರವಿರುವ 'ನಾಗರಹೊಳೆ' ಕರ್ನಾಟಕದ ಅತ್ಯಂತ ಸುಂದರ ಮತ್ತು ದಟ್ಟವಾದ ಅರಣ್ಯಗಳಲ್ಲಿ ಒಂದಾಗಿದೆ.ದಟ್ಟ ಹಸಿರು ವರ್ಣದಿಂದ ಕಂಗೊಳಿಸುವ ಬೆಟ್ಟ,ಗುಡ್ಡ,ಕಣಿವೆಗಳಿಂದ ಮತ್ತು ತೇಗ,ಗಂಧ,ಬೀಟೆ,ಸಿಲ್ವರ್ ಓಕ್ ಮುಂತಾದ ಅಮೂಲ್ಯ ವೃಕ್ಷಗಳಿಂದ ಈ ಅರಣ್ಯ ನಳನಳಿಸುತ್ತಿದೆ.ವಿನಾಶದ ಅಂಚಿನಲ್ಲಿರುವ ಅನೇಕ ಪ್ರಾಣಿ,ಪಕ್ಷಿ ಮತ್ತು ಸಸ್ಯ ಪ್ರಭೇದಗಳನ್ನು ಈ ಕಾಡುಗಳು ಪೋಷಿಸುತ್ತಿವೆ. ಭಾರತದ ರಾಷ್ಟ್ರೀಯ ಪ್ರಾಣಿಯಾದ 'ಹುಲಿ' ಮತ್ತು ರಾಷ್ಟ್ರಪಕ್ಷಿ 'ನವಿಲು'ಗಳು ಇಲ್ಲಿ ವಿನಾಶದಂಚಿನಲ್ಲಿವೆ.೫೧೧ ಚದರ ಕಿ.ಮೀ.ವಿಸ್ತೀರ್ಣದಲ್ಲಿ ಹರಡಿರುವ ಈ ಕಾಡು ಜಿಂಕೆ,ಬೊಗಳುವ ಜಿಂಕೆ(Barking deer)ಕರಡಿ,ಚಿರತೆ,ಆನೆ,ಕಾಡುಪಾಪ,ನೀರುನಾಯಿ,ಮೊಸಳೆ,ಹೆಬ್ಬಾವು,ಮರಕುಟುಕ,ಗ್ರೇಟ್ ಇಂಡಿಯನ್ ಹಾರ್ನ್‌ಬಿಲ್,ಗಿಡುಗ,ಹದ್ದು,ಡೇಗೆ,ಪ್ಯಾಂಗೋಲಿನ್,ಹಾರುವ ಅಳಿಲುಗಳಿಗೆ ತಾಣವಾಗಿದೆ.ಜೇನು ಕುರುಬರು,ಬೆಟ್ಟ ಕುರುಬರು ಹಾಗೂ ಹಕ್ಕಿಪಿಕ್ಕಿಗಳ ನೆಲೆವೀಡು ಕೂಡಾ ಆಗಿದೆ.ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ವಿಶಾಲವಾಗಿ ಹಬ್ಬಿರುವ ಈ ಕಾಡುಗಳು ಕರ್ನಾಟಕ,ಭಾರತವೇ ಅಲ್ಲದೆ ಇಡೀ ವಿಶ್ವದಲ್ಲೇ ಅತ್ಯಂತ ವಿಶೇಷ ಜೀವಿ ವೈವಿಧ್ಯಗಳನ್ನು ಪೋಷಿಸುತ್ತಿವೆ.ನಾಗರಹೊಳೆ,ವೈನಾಡು,ಬಂಡೀಪುರ ಮತ್ತು ಮುದುಮಲೈ ಕಾಡುಗಳನ್ನು ಒಂದು ಸಂರಕ್ಷಿತ ವಲಯವನ್ನಾಗಿ ಗುರುತಿಸಲಾಗಿದೆ.
ಕಬಿನಿ, ಲಕ್ಷ್ಮಣ ತೀರ್ಥ, ಮತ್ತು ನಾಗರಹೊಳೆಗಳು ಇಲ್ಲಿಯ ಪ್ರಮುಖ ನದಿಗಳು. 'ನಾಗರ' ಎಂದರೆ ಹಾವಿನ ರೀತಿಯಲ್ಲಿ ಹರಿಯುವ ನದಿ, ತೊರೆಗಳು ಇಲ್ಲಿ ಹರಿಯುವುದರಿಂದ ನಮ್ಮ ಜನಪದರು ಈ ಕಾಡುಗಳನ್ನು 'ನಾಗರಹೊಳೆ' ಎಂದರು. ಈ ನದಿಗಳು ಹಲವಾರು ಸುಂದರ ಜಲಪಾತಗಳನ್ನೂ ಸೃಷ್ಟಿಸಿವೆ.