Wikipedia:ವಿಶೇಷ ಬರಹ/ಸಂಚಿಕೆ - ೨೬
From Wikipedia
ರಾಮಾಯಣ ಹಿಂದೂ ಧರ್ಮದ ಪವಿತ್ರಗ್ರಂಥಗಳಲ್ಲಿ ಮುಖ್ಯವಾದುದು. ಈ ಬೃಹತ್ಕಾವ್ಯವು ವಾಲ್ಮೀಕಿ ಎಂಬ ಋಷಿಯಿಂದ ರಚಿಸಲ್ಪಟ್ಟಿದೆ. "ರಾಮಾಯಣ" ಪದವನ್ನು ತತ್ಪುರುಷ ಸಮಾಸವಾಗಿ ವಿಭಜಿಸಿದರೆ (ರಾಮನ+ಆಯಣ=ರಾಮಾಯಣ) "ರಾಮನ ಕಥೆ" ಎಂಬ ಅರ್ಥ ಬರುತ್ತದೆ. ರಾಮಾಯಣವು ೨೪೦೦೦ ಶ್ಲೋಕಗಳಿಂದ ರಚಿತವಾಗಿದ್ದು, ೭ ಕಾಂಡಗಳಾಗಿ ವಿಭಜಿತವಾಗಿದೆ. ರಾಮಾಯಣದ ಕಥೆಯು ಮುಖ್ಯವಾಗಿ ಅಯೋಧ್ಯೆಯ ರಾಜಪುತ್ರ ರಾಮ, ಆತನ ಮಡದಿ ಸೀತೆ ಹಾಗೂ ಸೀತೆಯ ಅಪಹರಣ ಮಾಡಿದ ರಾವಣನ ಸಂಹಾರವನ್ನು ಕುರಿತಾಗಿದೆ.
ಇತ್ತೀಚಿನ ಸಂಶೋಧನೆಗಳಂತೆ ರಾಮಾಯಣದ ರಚನಾ ಕಾಲ ಕ್ರಿ.ಪೂ. ೫ನೇ ಶತಮಾನದಿಂದ ಕ್ರಿ.ಪೂ. ೧ನೇ ಶತಮಾನವೆಂದು ನಿರ್ಧರಿಸಲಾಗಿದೆ. ಈ ಕಾಲವು ಮಹಾಭಾರತದ ಮೊದಲ ಆವೃತ್ತಿಗಳಿಗೆ ಹತ್ತಿರವಾದ ಕಾಲ ಎಂದು ಹೇಳಲಾಗುತ್ತದೆ. ಪ್ರಾಚೀನ ಭಾರತದ ಪ್ರಮುಖ ಸಾಹಿತ್ಯ ಕೃತಿಗಳಲ್ಲಿ ಒಂದಾದ ರಾಮಾಯಣವು, ಭಾರತ ಉಪಖಂಡದ ಕಲೆ ಮತ್ತು ಸಂಸ್ಕೃತಿಯ ಮೇಲೆ ಆಳವಾದ ಪ್ರಭಾವ ಬೀರಿದೆ. ರಾಮನ ಕಥೆಯು ಅನೇಕ ಭಾಷೆಗಳಲ್ಲಿ ನಂತರದ ಬಹಳಷ್ಟು ಸಾಹಿತ್ಯಕ್ಕೆ ಸ್ಪೂರ್ತಿಯಾಯಿತು. ೧೬ನೇ ಶತಮಾನದ ಹಿಂದಿ ಕವಿ ತುಳಸೀದಾಸರು, ೧೩ನೇ ಶತಮಾನದ ತಮಿಳು ಕವಿ ಕಂಬ, ೨೦ನೇ ಶತಮಾನದ ಕನ್ನಡದ ರಾಷ್ಟ್ರಕವಿ ಕುವೆಂಪು (ಶ್ರೀ ರಾಮಾಯಣದರ್ಶನಂ) ಪ್ರಭಾವಗೊಂಡವರಲ್ಲಿ ಪ್ರಮುಖರು.
ರಾಮಾಯಣ ಕೇವಲ ಹಿಂದೂ ಧಾರ್ಮಿಕ ಕೃತಿಯಾಗಿ ಉಳಿದಿಲ್ಲ. ೮ನೇ ಶತಮಾನದಿಂದ ಅನೇಕ ಭಾರತೀಯ ವಸಾಹತುಗಳು ಆಗ್ನೇಯ ಏಷ್ಯಾದಲ್ಲಿ ಏರ್ಪಟ್ಟಾದಾಗ ರಾಮಾಯಣದ ಕಥೆ ವಿವಿಧ ರೂಪಾಂತರಗಳ ಮೂಲಕ ಆ ದೇಶಗಳಿಗೂ ಹರಡಿತು. ಇವುಗಳ ಮೂಲಕ ರಾಮಾಯಣ ಇಂದಿನ ಇಂಡೊನೇಷ್ಯಾ, ಥೈಲೆಂಡ್, ಕಾಂಬೋಡಿಯ, ಮಲೇಷಿಯ, ವಿಯೆಟ್ನಾಮ್ ಮತ್ತು ಲಾಓಸ್ ಗಳಲ್ಲಿ ಸಾಹಿತ್ಯ, ಶಿಲ್ಪಕಲೆ ಮತ್ತು ನಾಟಕ ಮಾಧ್ಯಮಗಳಲ್ಲಿ ವ್ಯಕ್ತವಾಗಿದೆ.