ಮಹಿಂದಾ ರಾಜಪಕ್ಸೆ
From Wikipedia
ಮಹಿಂದಾ ರಾಜಪಕ್ಸೆ ಶ್ರೀಲಂಕಾದ ಐದನೆ ರಾಷ್ಟ್ರಪತಿ ಮತ್ತು ೧೩ನೆ ಪಾರ್ಲಿಮೆಂಟಿನ ಪ್ರಧಾನ ಮಂತ್ರಿ . ನವೆಂಬರ್ ೧೯ ೨೦೦೫ರಲ್ಲಿ ಇವರು ಶ್ರೀಲಂಕಾದ ಐದನೆ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡರು. ಮಹಿಂದಾ ರಾಜಪಕ್ಸೆ ಶ್ರೀಲಂಕಾ ಸ್ವಾತಂತ್ರ ಪಕ್ಷದ (ಶ್ರೀಲಂಕಾ ಫ್ರೀಡಂ ಪಾರ್ಟಿ) ಪ್ರಮುಖ ಸದಸ್ಯರಲ್ಲೊಬ್ಬರು.
ನವೆಂಬರ್ ೧೮ ೧೯೪೫ರಲ್ಲಿ ಶ್ರೀಲಂಕಾದ ದಕ್ಷಿಣ ಗ್ರಾಮಾಂತರ ಜಿಲ್ಲೆಯಾದ ಹಂಬನತೋಟದ ಸಿಂಹಳೀಯ ಬೌದ್ದ ಕುಟುಂಬದಲ್ಲಿ ಜನಿಸಿದ ರಾಜಪಕ್ಸೆ ವ್ರುತ್ತಿಯಿಂದ ಮಾನವೀಯ ಹಕ್ಕುಗಳ ನ್ಯಾಯವಾದಿಗಳು. ೧೯೭೦ರಿಂದ ಶ್ರೀಲಂಕಾದ ಪಾರ್ಲಿಮೆಂಟಿನಲ್ಲಿ ಹಂಬನತೋಟ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಮಹಿಂದಾ ರಾಜಪಕ್ಸೆಯವರ ತಂದೆ ಡಾನ್ ಆಲ್ವಿನ್ ರಾಜಪಕ್ಸೆ ಕೂಡ ಅದೆ ಕ್ಷೇತ್ರವನ್ನು ೧೯೪೭ರಿಂದ ೧೯೬೦ರ ವರೆಗೆ ಪ್ರತಿನಿಧಿಸಿದ್ದರು. ಶ್ರೀಲಂಕಾ ಸ್ವಾತಂತ್ರ ಪಕ್ಷದ (ಶ್ರೀಲಂಕಾ ಫ್ರೀಡಂ ಪಾರ್ಟಿ) ನಾಯಕಿ ಮತ್ತು ಶ್ರೀಲಂಕಾದ ಮಾಜಿ ಅಧ್ಯಕ್ಷೆಯಾದ ಚಂದ್ರಿಕಾ ಕುಮಾರತುಂಗರ ಬಹುದಿನದ ನಿಕಟವರ್ತಿ ಎಂದೆ ಪರಿಗಣಿಸಲ್ಪಡುವ ರಾಜಪಕ್ಸೆಯವರು ಏಪ್ರಿಲ್ ೬ ೨೦೦೪ರಲ್ಲಿ ೧೩ನೆ ಪಾರ್ಲಿಮೆಂಟಿನ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು. ಪ್ರಧಾನ ಮಂತ್ರಿಯಾಗುವ ಮುಂಚೆ ೧೯೯೪ರಿಂದ ೨೦೦೧ರವರೆಗೆ ಚಂದ್ರಿಕಾ ಕುಮಾರತುಂಗರ ಮಂತ್ರಿಮಂಡಲದಲ್ಲಿ ಇವರು ಕಾರ್ಮಿಕ ಮತ್ತು ಮೀನುಗಾರಿಕೆ ಖಾತೆ ವಹಿಸಿದ್ದರು. ರಾಜಪಕ್ಸೆ ತಮಿಳು ಉಗ್ರಗಾಮಿ ಸಂಸ್ಥೆಯಾದ ಎಲ್‌ಟಿಟಿಇ ಜೊತೆ ಶಾಂತಿ ಮಾತುಕತೆ ನೆಡಸುವರೆಂಬ ಬಲವಾದ ನಂಬಿಕೆಯಿದ್ದರೂ, ಜನತಾ ವಿಮುಕ್ತಿ ಪೆರಮುಣ(ಜೆವಿಪಿ)ಪಕ್ಷದೊಡನೆ ಅವರ ರಾಜಕೀಯ ಮೈತ್ರಿ ಇದರ ಮೇಲೆ ಪ್ರಶ್ನಾಚಿನ್ಹೆ ಹಾಕಿದೆ. ನವೆಂಬರ್ ೧೭ ೨೦೦೫ರಲ್ಲಿ ನೆಡೆದ ಚುನಾವಣೆಯಲ್ಲಿ ರಾಜಪಕ್ಸೆ ಸಂಯುಕ್ತ ರಾಷ್ಟ್ರೀಯ ಪಕ್ಷದ (ಯುನೈಟೆಡ್ ನ್ಯಾಷನಲ್ ಪಾರ್ಟಿ) ರನೈಲ್ ವಿಕ್ರಮಸಿಂಘೆಯವರನ್ನು ಪರಾಭವಗೊಳಿಸಿದರು.