ಮಂಗಳ (ಗ್ರಹ)
From Wikipedia
ಮಂಗಳ ಕನ್ನಡ ವಾರಪತ್ರಿಕೆ ಬಗ್ಗೆ ಮಾಹಿತಿಗೆ ಈ ಲೇಖನ ನೋಡಿ.
ಹಬ್‌ಲ್ ಬಾಹ್ಯಾಕಾಶ ದೂರದರ್ಶಕಕ್ಕೆ ಕಾಣಿಸಿದಂತೆ ಮಂಗಳ ಗ್ರಹ | |
ಕಕ್ಷೆಯ ಗುಣಗಳು | |
---|---|
ದೀರ್ಘಾರ್ಧ ಅಕ್ಷ | 227,936,637 ಕಿ.ಮೀ. (141,632,976 ಮೈಲಿ) 1.523 662 31 ಖಗೋಳ ಮಾನ (AU) |
ಕಕ್ಷೆಯ ಪರಿಧಿ | 1,429,000,000 ಕಿ.ಮೀ. (887,900,000 ಮೈಲಿ) 9.553 ಖಗೋಳ ಮಾನ (AU) |
ಕಕ್ಷೀಯ ಕೇಂದ್ರ ಚ್ಯುತಿ | 0.093 412 33 |
Perihelion | 206,644,545 km (128,402,967 mi) 1.381 333 46 AU |
Aphelion | 249,228,730 km (154.863,553 mi) 1.665 991 16 AU |
ಕಕ್ಷೀಯ ಪರಿಭ್ರಮಣ ಕಾಲ | 686.9600 ದಿನ |
Synodic period | 779.96 d (2.135 a) |
ಸರಾಸರಿ ಕಕ್ಷಾ ವೇಗ | 24.077 ಕಿ.ಮೀ./ಪ್ರತಿ ಕ್ಷಣ (53,859 ಮೈಲಿ/ಪ್ರತಿ ಘಂಟೆ) |
ಗರಿಷ್ಠ ಕಕ್ಷಾ ವೇಗ | 26.499 ಕಿ.ಮೀ./ಪ್ರತಿ ಕ್ಷಣ (59,277 ಮೈಲಿ/ಪ್ರತಿ ಘಂಟೆ) |
ಕನಿಷ್ಠ ಕಕ್ಷಾ ವೇಗ | 21.972 ಕಿ.ಮೀ./ಪ್ರತಿ ಕ್ಷಣ (49,150 ಮೈಲಿ/ಪ್ರತಿ ಘಂಟೆ) |
ಓರೆ | 1.850 61° (ಸೂರ್ಯನ ಸಮಭಾಜಕ ರೇಖೆಗೆ 5.65°) |
Longitude of the ascending node |
49.578 54° |
Argument of the perihelion |
286.462 30° |
ನೈಸರ್ಗಿಕ ಉಪಗ್ರಹಗಳ ಸಂಖ್ಯೆ | 2 |
ಭೌತಿಕ ಗುಣಲಕ್ಷಣಗಳು | |
ಸಮಭಾಜಕ ರೇಖೆಯ ವ್ಯಾಸ | 6,804.9 ಕಿ.ಮೀ. (4228.4 ಮೈಲಿ) (ಭೂಮಿಯ 53.3%) |
ಧ್ರುವಗಳ ಮೂಲಕ ವ್ಯಾಸ | 6,754.8 ಕಿ.ಮೀ. (4197.2 ಮೈಲಿ) (ಭೂಮಿಯ 53.1%) |
Oblateness | 0.007 36 |
ಮೇಲ್ಮೈ ವಿಸ್ತೀರ್ಣ | 1.448 x 108 ಚದರ. ಕಿ.ಮೀ., 55,907,000 ಚದರ ಮೈಲಿ (144 798 465 ಚದರ. ಕಿ.ಮೀ.) (ಭೂಮಿಯ 28.4%) |
ಗಾತ್ರ | 1.6318 x 1011 ಘನ. ಕಿ.ಮೀ. (ಭೂಮಿಯ 15.1%) |
ದ್ರವ್ಯರಾಶಿ | 6.4185 x 1023 ಕಿ.ಗ್ರಾಂ. (ಭೂಮಿಯ 10.7%) |
ಸರಾಸರಿ ಸಾಂದ್ರತೆ | 3.934 ಗ್ರಾಂ/ಪ್ರತಿ ಘನ ಸೆಂ.ಮೀ. |
ಸಮಭಾಜಕದ ಬಳಿ ಗುರುತ್ವ | 3.69 ಮೀ./ಸೆ2 (ಭೂಮಿಯ 37.6%) |
ಮುಕ್ತಿ ವೇಗ | 5.027 ಕಿ.ಮೀ./ಸೆ (11,245 ಮೈ/ಘಂ) |
ಅಕ್ಷೀಯ ಪರಿಭ್ರಮಣ ಕಾಲ | 1.025 957 ದಿನ (24.622 962 ಘಂಟೆಗಳು) |
ಅಕ್ಷೀಯ ಪರಿಭ್ರಮಣ ವೇಗ | 868.22 ಕಿ.ಮೀ/ಘಂ (539.49 ಮೈ/ಘಂ) (ಸಮಭಾಜಕದಲ್ಲಿ) |
ಅಕ್ಷದ ಓರೆ | 25.19° |
Right ascension of North pole |
317.681 43° (21 h 10 min 44 s) |
Declination | 52.886 50° |
ಪ್ರತಿಫಲನಾಂಶ | 0.15 |
ಮೇಲ್ಮೈ ತಾಪಮಾನ - ಕನಿಷ್ಠ - ಸರಾಸರಿ - ಗರಿಷ್ಠ |
−140 °ಸೆ. (133 ಕೆಲ್ವಿನ್) −63 °ಸೆ. (210 ಕೆಲ್ವಿನ್) 20 °C (293 ಕೆಲ್ವಿನ್) |
Adjective | Martian |
ವಾಯುಮಂಡಲದ ಗುಣಗಳು | |
ವಾತಾವರಣದ ಒತ್ತಡ | 0.7–0.9 kPa |
ಇಂಗಾಲದ ಡೈ-ಆಕ್ಸೈಡ್ | 95.72% |
ಸಾರಜನಕ | 2.7% |
ಆರ್ಗಾನ್ | 1.6% |
ಆಮ್ಲಜನಕ | 0.13% |
ಇಂಗಾಲದ ಮಾನಾಕ್ಸೈದ್ | 0.07% |
ನೀರಾವಿ | 0.03% |
ನೈಟ್ರಿಕ್ ಆಕ್ಸೈಡ್ | 0.01% |
ನಿಯಾನ್ | 2.5 ಭಾಗಗಳು/ಪ್ರತಿ ದಶಲಕ್ಷದಲ್ಲಿ |
ಕ್ರಿಪ್ಟಾನ್ | 300 ಭಾಗಗಳು/ಪ್ರತಿ ಶತಕೋಟಿಯಲ್ಲಿ |
ಜೆನಾನ್ | 80 ಭಾಗಗಳು/ಪ್ರತಿ ಶತಕೋಟಿಯಲ್ಲಿ |
ಓಜೋನ್ | 30 ಭಾಗಗಳು/ಪ್ರತಿ ಶತಕೋಟಿಯಲ್ಲಿ |
edit |
ಘಂ.
ಮಂಗಳ - ಸೂರ್ಯನ ಸೌರಮಂಡಲದಲ್ಲಿನ ನಾಲ್ಕನೆಯ ಗ್ರಹ. ಸೂರ್ಯನಿಗೆ ಭೂಮಿಗಿಂತ ದೂರದಲ್ಲಿದ್ದು, ಗುರು ಗ್ರಹಕ್ಕಿಂತ ಹತ್ತಿರದಲ್ಲಿದೆ.ಆಂಗ್ಲ ಭಾಷೆಯಲ್ಲಿ 'ಮಾರ್ಸ್'(Mars) ಎಂದು ಕರೆಯುತ್ತಾರೆ. ಸುಮಾರು ಭೂಮಿಯ ಅರ್ಧದಷ್ಟು ವ್ಯಾಸವುಳ್ಳ ಈ ಗ್ರಹ ತನ್ನ ಅಕ್ಷವನ್ನು ಸುಮಾರು 24 ಘಂಟೆಗಳಲ್ಲಿ ಸುತ್ತುತ್ತದೆ. ಆದರೆ ಸೂರ್ಯನ ಸುತ್ತ ಪ್ರದಕ್ಷಿಣೆ ಹಾಕಲು 2 ವರ್ಷ(686.98 ದಿನ)ಗಳೇ ಬೇಕಾಗುತ್ತದೆ.
ಈ ಗ್ರಹದ ವ್ಯಾಸ 6,790 ಕಿ.ಮೀ.(4,220 ಮೈಲಿ). ಗಳು. ಸೂರ್ಯನಿಂದ ಸುಮಾರು 228,000,000 ಕಿ.ಮೀ.(142,000,000 ಮೈಲಿ)ದೂರದಲ್ಲಿರುವ ಮಂಗಳದ ವಾತಾವರಣದಲ್ಲಿ ಇಂಗಾಲಾಮ್ಲದೊಂದಿಗೆ ಸ್ವಲ್ಪ ನೀರು ಕೂಡಾ ಇದೆ. ಮಂಗಳ ಗ್ರಹ ಕೆಂಪು ಬಣ್ಣದ್ದಾಗಿರುವುದರಿಂದ,ಇದನ್ನು 'ಕೆಂಪು ಗ್ರಹ' ಅಥವಾ 'ಅಂಗಾರಕ' (Red Planet) ಎಂದೂ ಕರೆಯುತ್ತಾರೆ. ಮಂಗಳ ಗ್ರಹಕ್ಕೆ ಫೋಬೋಸ್ ಮತ್ತು ಡೀಮೋಸ್ ಎಂಬ 2 ನೈಸರ್ಗಿಕ ಉಪಗ್ರಹಗಳಿವೆ. ಚಿಕ್ಕದಾಗಿ ವಿಲಕ್ಷಣ ರೂಪದಲ್ಲಿರುವ ಈ ಉಪಗ್ರಹಗಳು ಮಂಗಳದ ಗುರುತ್ವದಿಂದ ಸೆರೆಹಿಡಿಯಲ್ಪಡುವ ಮುನ್ನ ಆಕಾಶಕಾಯಗಳಾಗಿದ್ದಿರಬಹುದು. ಭೂಮಿಯಿಂದ ಮಂಗಳವನ್ನು ಬರಿಗಣ್ಣಿನಿಂದ ನೋಡಬಹುದು. ಮಂಗಳದ ಗೋಚರ ಪ್ರಮಾಣವು −2.9ರವರೆಗೂ ಇರುತ್ತದೆ. ಭೂಮಿಯಿಂದ ನೋಡಿದಾಗ ಕೇವಲ ಶುಕ್ರ, ಚಂದ್ರ ಮತ್ತು ಸೂರ್ಯಗಳು ಮಂಗಳಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತವೆ. ಆದರೆ, ವರ್ಷದ ಹಲವು ದಿನಗಳಲ್ಲಿ ಗುರು (ಗ್ರಹ)ವು ಮಂಗಳಕ್ಕಿಂತ ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತದೆ.
1965ರಲ್ಲಿ Mariner 4ರ ಮೊಟ್ಟಮೊದಲ ಮಂಗಳಯಾನಕ್ಕೆ ಮುನ್ನ ವೈಜ್ಞಾನಿಕ ಸಮುದಾಯದಲ್ಲಿ (ಬಹುಶಃ ಇತರೆ ಸಮುದಾಯಗಳಲ್ಲೂ), ಮಂಗಳದ ಮೇಲೆ ಸಾಕಷ್ಟು ನೀರು ದ್ರವರೂಪದಲ್ಲಿರಬಹುದೆಂಬ ಆಶಾವಾದವಿತ್ತು. ಮಂಗಳದ ಧ್ರುವಗಳ ಬಳಿ ಕಂಡುಬಂದ ತಿಳಿ ಮತ್ತು ಗಾಢವಾದ ಕಲೆಗಳು ಪುನಃ ಪುನಃ ಆಕಾರದಲ್ಲಿ ಬದಲಾಗುತ್ತಿದ್ದವು. ಇದಲ್ಲದೆ, ನೀರಿನ ಕಾಲುವೆಗಳಂತಿರುವ ಉದ್ದವಾದ ಗಾಢ ಪಟ್ಟಿಗಳೂ ಕಂಡುಬಂದವು. ಮಂಗಳದ ಮೇಲೆ ನೀರಿನ ಬಗ್ಗೆ ಉಂಟಾಗಿದ್ದ ಆಶಾದಾಯಕ ನಿರೀಕ್ಷೆಗೆ ಈ ವೀಕ್ಷಣೆಗಳೇ ಕಾರಣವಾಗಿದ್ದಿರಬಹುದು.
ಈ ಪಟ್ಟಿಗಳು ಅಸ್ತಿತ್ವದಲ್ಲೇ ಇಲ್ಲವೆಂದೂ, ಇವು ಕೇವಲ ದೃಷ್ಟಿ ಭ್ರಾಂತಿಯೆಂದೂ ನಂತರದ ವಿಶ್ಲೇಷಣೆಗಳಿಂದ ತಿಳಿದುಬಂದಿತು. ಹೀಗಿದ್ದರೂ, ಭೂಮಿಯನ್ನುಳಿದು ಬೇರಾವುದೇ ಗ್ರಹಕ್ಕಿಂತಲೂ ಮಂಗಳದ ಮೇಲೆ ನೀರಿನ (ಮತ್ತು ಜೀವದ) ಅಸ್ತಿತ್ವವು ಅತಿ ಹೆಚ್ಚು ಸಂಭವನೀಯವಾಗಿದೆ. ಆದ್ದರಿಂದ ಈಗಲೂ ಅನ್ವೇಷಕಗಳು ಮಂಗಳದ ಮೇಲೆ ಸೂಕ್ಷ್ಮಜೀವಿಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿವೆ. ಮಂಗಳದ ದೈನಂದಿಕ ಚಲನೆ ಮತ್ತು ಋತುಮಾನಗಳು ಭೂಮಿಯ ಚಲನೆ ಮತ್ತು ಋತುಮಾನಗಳನ್ನು ಹೋಲುತ್ತವೆ. ಸೌರಮಂಡಲದಲ್ಲೇ ಅತಿ ಎತ್ತರ ಪರ್ವತವಾದ ಒಲಂಪಸ್ ಮಾನ್ಸ್, ಅತಿ ದೊಡ್ಡ ಕಂದರವಾದ ಮ್ಯಾರಿನೆರಿಸ್ ಕಣಿವೆ, ಮತ್ತು ಧ್ರುವದಲ್ಲಿ ಹಿಮವಲಯಗಳು ಮಂಗಳ ಗ್ರಹದ ಮೇಲೆ ಕಂಡುಬರುತ್ತವೆ. ಇತ್ತೀಚೆಗಿನ ಕೆಲವು ಆಧಾರಗಳ ಪ್ರಕಾರ, ಕೆಲವೇ ವರ್ಷಗಳ ಹಿಂದೆಯೂ ಮಂಗಳದ ಮೇಲೆ ನೀರು ದ್ರವರೂಪದಲ್ಲಿ ಪ್ರವಹಿಸಿರಬಹುದು.
ಪ್ರಸ್ತುತದಲ್ಲಿ ಮಂಗಳದ ಸುತ್ತ 4 ಗಗನನೌಕೆಗಳು ಪರಿಭ್ರಮಿಸುತ್ತಿವೆ: ಮಂಗಳ ಗ್ಲೋಬಲ್ ವೀಕ್ಷಕ, ಮಂಗಳ ಒಡಿಸ್ಸಿ, ಮಂಗಳ ಎಕ್ಸ್‌ಪ್ರೆಸ್, ಮತ್ತು ಮಂಗಳ ಬೇಹುಗಾರಿಕಾ ಪರಿಭ್ರಮಕ. ಭೂಮಿಯನ್ನು ಬಿಟ್ಟರೆ ಇನ್ನಾವ ಗ್ರಹದ ಮೇಲೂ ಇಷ್ಟೊಂದು ಪರಿಭ್ರಮಕಗಳು ಸುತ್ತುತ್ತಿಲ್ಲ. ಇದಲ್ಲದೆ ಪ್ರಸ್ತುತದಲ್ಲಿ ಮಂಗಳದ ಮೇಲ್ಮೈ ಮೇಲೆ ಸ್ಪಿರಿಟ್ ಮತ್ತು ಆಪರ್ಚುನಿಟಿ ಪರ್ಯಟಕಗಳೂ ಕಾರ್ಯ ನಿರ್ವಹಿಸುತ್ತಿವೆ.
ಪರಿವಿಡಿ |
[ಬದಲಾಯಿಸಿ] ಭೌತಿಕ ಲಕ್ಷಣಗಳು
ಮಂಗಳದ ಮೇಲ್ಮೈ ಕೆಂಪು/ಕಿತ್ತಳೆ ಬಣ್ಣವಾಗಿ ಗೋಚರಿಸುವುದಕ್ಕೆ ಕಾರಣ ಅದರಲ್ಲಿರುವ ಕಬ್ಬಿಣದ ಡೈ-ಆಕ್ಸೈಡ್ (ತುಕ್ಕು). ಮಂಗಳವು ಭೂಮಿಯ ಅರ್ಧದಷ್ಟು ವ್ಯಾಸವನ್ನು ಮತ್ತು, ಸಾಂದ್ರತೆ ಕಡಿಮೆಯಿರುವ ಕಾರಣ, ಭೂಮಿಯ ಹತ್ತನೇ ಒಂದು ಪಾಲು ದ್ರವ್ಯರಾಶಿಯನ್ನು ಹೊಂದಿದೆ. ಆದರೆ ಮಂಗಳದ ಮೇಲ್ಮೈ ವಿಸ್ತೀರ್ಣವು ಬಹುಮಟ್ಟಿಗೆ ಭೂಮಿಯ ಒಟ್ಟು ಒಣನೆಲದ ವಿಸ್ತೀರ್ಣದಷ್ಟೇ ಇದೆ. ಮಂಗಳವು ಗಾತ್ರದಲ್ಲಿ ಮತ್ತು ದ್ರವ್ಯರಾಶಿಯಲ್ಲಿ ಬುಧ ಗ್ರಹಕ್ಕಿಂತ ದೊಡ್ಡದಾಗಿದ್ದರೂ, ಬುಧವು ತನ್ನ ಮೇಲ್ಮೈನಲ್ಲಿ ಮಂಗಳಕ್ಕಿಂತ ಹೆಚ್ಚು ಗುರುತ್ವ ಬಲವನ್ನು ಹೊಂದಿದೆ. ಬುಧದ ಸಾಂದ್ರತೆ ಮಂಗಳದಕ್ಕಿಂತ ಬಹಳಷ್ಟು ಅಧಿಕವಾಗಿರುವುದೇ ಇದಕ್ಕೆ ಕಾರಣ.
[ಬದಲಾಯಿಸಿ] ಭೂವೈಜ್ಞಾನಿಕ ವಿವರಣೆ
ಮಂಗಳದಿಂದ ಭೂಮಿಗೆ ಬಂದ ಉಲ್ಕೆಗಳ ಪರಿಶೀಲನೆಯಿಂದ ಹಾಗೂ ಮಂಗಳದ ಪರಿಭ್ರಮಣವನ್ನು ಅಧ್ಯಯನ ಮಾಡಿದ ಆಧಾರದ ಮೇಲೆ, ಮಂಗಳದ ಮೇಲ್ಮೈ ಪದರವು ಮುಖ್ಯವಾಗಿ ಕಪ್ಪುಶಿಲೆಯಿಂದ ರಚಿತವಾಗಿರುವಂತೆ ಕಂಡುಬರುತ್ತದೆ. ಮಂಗಳದ ಮೇಲ್ಮೈನ ಸ್ವಲ್ಪ ಭಾಗವು ಸಾಮಾನ್ಯ ಕಪ್ಪುಶಿಲೆಗಿಂತ ಹೆಚ್ಚು ಸಿಲಿಕಾ ಸಮೃದ್ಧವಾಗಿದೆ ಎನ್ನುವುದಕ್ಕೆ ಕೆಲವು ಆಧಾರಗಳಿವೆ. ಈ ಭಾಗಗಳು ಭೂಮಿಯ ಮೇಲಿನ ಆಂಡೆಸೈಟಿಕ್ ಶಿಲೆಗಳಂತೆ ಕಂಡುಬರುತ್ತವೆ. ಆದರೆ ಇವು ಸಿಲಿಕಾ ಗಾಜಿನಿಂದಲೂ ರಚಿತವಾಗಿರಬಹುದು. ಮೇಲ್ಮೈನ ಬಹುಭಾಗವು ಬಹಳ ನುಣುಪಾದ ಕಬ್ಬಿಣದ (೩)ಡೈ-ಆಕ್ಸೈಡ್ (ತುಕ್ಕು) ಧೂಳಿನ ದಪ್ಪನಾದ ಪದರದಿಂದ ಹೊದಿಸಲ್ಪಟ್ಟಿದೆ.[೧]
ಮಂಗಳದ ಮೇಲೆ ಹೆಮಟೈಟ್, ಜಿಯೊತೈಟ್ ಮುಂತಾದ ಖನಿಜಗಳು ಕಂಡುಬಂದಿವೆ. ಸಾಮನ್ಯವಾಗಿ ಈ ಖನಿಜಗಳು ನೀರಿನ ಉಪಸ್ಥಿತಿಯಲ್ಲಿ ಮಾತ್ರ ರೂಪುಗೊಳ್ಳುತ್ತವೆ. ಈ ಮೇಲಿನ ಮತ್ತು ಸಂಬಂಧಪಟ್ಟ ಇತರ ಸಂಶೋಧನೆಗಳ ಕಾರಣದಿಂದಾಗಿ, ಮಂಗಳದ ಮೇಲೆ ಒಂದು ಕಾಲದಲ್ಲಿ ನೀರು ಜಲರೂಪದಲ್ಲಿತ್ತೆಂಬುದಕ್ಕೆ ನಿರ್ಣಾಯಕ ಸಾಕ್ಷ್ಯಾಧಾರಗಳಿವೆ.[೨]
ಮಂಗಳಕ್ಕೆ ತನ್ನದೇ ಆದ ಕಾಂತಕ್ಷೇತ್ರ ಇಲ್ಲದಿದ್ದರೂ, ಮೇಲ್ಮೈನ ಕೆಲವು ಭಾಗಗಳು ಕಾಂತೀಯವಾಗಿರುವುದು ಬೆಳಕಿಗೆ ಬಂದಿದೆ. ಈ ಭಾಗಗಳನ್ನು ಭೂಮಿಯಲ್ಲಿ ಸಾಗರ ತಳಗಳ ಮೇಲೆ ಕಂಡುಬರುವ ಕಾಂತೀಯ ಪಟ್ಟಿಗಳಿಗೆ ಹೋಲಿಸಲಾಗಿದೆ. 1999ರಲ್ಲಿ ಪ್ರಕಾಶಿಸಲಾದ ಮತ್ತು Mars Global Surveyorನ ನೆರವಿನಿಂದ ಅಕ್ಟೋಬರ್ 2005ನಲ್ಲಿ ಮರುಪರಿಶೀಲಿಸಲಾದ ಒಂದು ಸಿದ್ಧಾಂತದ ಪ್ರಕಾರ, ಈ ಪಟ್ಟಿಗಳು ಮಂಗಳದ ಮೇಲೆ ಭೂಭಾಗಗಳ ಪ್ರಾಚೀನ ಚಟುವಟಿಕೆಗಳ ಸಾಕ್ಷಿ[೩]. ಈ ಪ್ರಾಚೀನ ಕಾಂತೀಯತೆಯು ಧ್ರುವಗಳ ಚಲನೆಯಿಂದಲೂ ಉಂಟಾಗಿರಬಹುದು.
ಮಂಗಳದ ಒಳಭಾಗದ ಪ್ರಸ್ತುತ ಮಾದರಿಗಳಿಂದ ತರ್ಕಿಸಬಹುದಾದ ವಿಷಯಗಳು: ಮಂಗಳದ ಒಳಭಾಗವು ಸುಮಾರು 1,480 ಕಿ.ಮೀ. ತ್ರಿಜ್ಯವುಳ್ಳ ಗೋಳಾಕಾರದ ಒಂದು ವಲಯ. ಮುಖ್ಯವಾಗಿ ಕಬ್ಬಿಣದಿಂದ ಕೂಡಿರುವ ಈ ವಲಯದಲ್ಲಿ ಸುಮಾರು 15-17% ರಷ್ಟು ಗಂಧಕವೂ ಸೇರಿದೆ. ಭಾಗಶಃ ದ್ರವೀಕೃತವಾಗಿರುವ ಕಬ್ಬಿಣದ-ಸಲ್ಫೈಡ್‍ನ ಈ ವಲಯದಲ್ಲಿ, ಭೂಮಿಯ ಒಳಭಾಗದಲ್ಲಿ ಸಿಗುವುದಕ್ಕಿಂತ ಎರಡುಪಟ್ಟು ಹಗುರ ಧಾತುಗಳು ಕಂಡುಬರುತ್ತವೆ. ಈ ಒಳಭಾಗವು ಸಿಲಿಕೇಟ್‍ನ ಒಂದು ಪರದರದಿಂದ ಆವೃತವಾಗಿದೆ. ಪ್ರಸ್ತುತದಲ್ಲಿ ನಿಶ್ಚಲವಾಗಿರುವಂತೆ ಕಾಣುವ ಈ ಸಿಲಿಕೇಟ್ ಪದರವು, ಹಿಂದಿನ ಕಾಲದಲ್ಲಿ ಮಂಗಳದ ಮೇಲೆ ಭೂಭಾಗಗಳನ್ನು ಮತ್ತು ಅಗ್ನಿ ಪರ್ವತಗಳನ್ನು ರೂಪಿಸಿತು ಎನ್ನಲಾಗಿದೆ. ಮಂಗಳದ ಮೇಲ್ಮೈ ಸರಾಸರಿ ಸುಮಾರು 50 ಕಿ.ಮೀ ದಪ್ಪನಾಗಿದೆ ಮತ್ತು ಇದರ ಗರಿಷ್ಟ ದಪ್ಪ 125 ಕಿ.ಮೀ. ಗಳು.[೪]
ಮಂಗಳದ ಭೂವೈಜ್ಞಾನಿಕ ಇತಿಹಾಸವನ್ನು ಸ್ಥೂಲವಾಗಿ ಮೂರು ಕಾಲಗಳಲ್ಲಿ ವಿಂಗಡಣೆ ಮಾಡಬಹುದು:
- ನೊಏಕಿಯನ್ ಕಾಲ (ನೊಏಕಿಸ್ ವಲಯದ ಆಧಾರವಾಗಿ ಹೆಸರಿಡಲಾಗಿದೆ): 380 ರಿಂದ 350 ಕೋಟಿ ವರ್ಷಗಳ ಹಿಂದೆ ಮಂಗಳದ ಉದ್ಭವ ಮತ್ತು ರಚನೆ. ನೊಏಕಿಯನ್ ಕಾಲದ ಮೇಲ್ಮೈಗಳಲ್ಲಿ ಅಪ್ಪಳಿಕೆಯಿಂದ ಉಂಟಾದ ಹಲವಾರು ಕುಳಿಗಳು ಕಂಡುಬರುತ್ತವೆ. ಥಾರ್ಸಿಸ್ ಉಬ್ಬು ಈ ಕಾಲದಲ್ಲೇ ರೂಪುಗೊಂಡಿತೆಂದು ಅಂದಾಜುಮಾಡಲಾಗಿದೆ. ಈ ಕಾಲದ ಕೊನೆಯ ಭಾಗದಲ್ಲಿ ನೀರು ದ್ರವ ರೂಪದಲ್ಲಿ ಲಭ್ಯವಿದ್ದ ಕಾರಣ ವ್ಯಾಪಕವಾಗಿ ಪ್ರವಾಹಗಳುಂಟಾಗುತ್ತಿದ್ದವು.
- ಹೆಸ್ಪೇರಿಯನ್ ಕಾಲ (ಹೆಸ್ಪೇರಿಯ ಸಮತಳದ ಆಧಾರವಾಗಿ ಹೆಸರಿಡಲಾಗಿದೆ): 350 ರಿಂದ 180 ಕೋಟಿ ವರ್ಷ ಹಿಂದಿನವರೆಗೆ. ಈ ಕಾಲದಲ್ಲಿ ವ್ಯಾಪಕವಾಗಿ ಲಾವಾ ಸಮತಳಗಳು ರೂಪುಗೊಂಡವು.
- ಅಮೆಜೋನಿಯನ್ ಕಾಲ (ಅಮೆಜೋನಿಸ್ ಸಮತಳದ ಆಧಾರದ ಮೇಲೆ ಹೆಸರಿಡಲಾಗಿದೆ): 180 ಕೋಟಿ ವರ್ಷಗಳಿಂದ ಈಗಿನವರೆಗೆ. ಅಮೆಜೋನಿಯನ್ ವಲಯಗಳಲ್ಲಿ ಅಪ್ಪಳಿಕೆ ಕುಳಿಗಳು ಬಹಳಷ್ಟು ಮಟ್ಟಿಗೆ ಇಲ್ಲದಿದ್ದರೂ, ಈ ವಲಯಗಳಲ್ಲಿ ಹೆಚ್ಚಿನ ವೈವಿಧ್ಯಗಳು ಕಂಡುಬರುತ್ತವೆ. ಒಲಂಪಸ್ ಮಾನ್ಸ್ ಈ ಕಾಲದಲ್ಲಿ ರೂಪುಗೊಂಡಿತು. ಇದಲ್ಲದೆ ಅಮೆಜೋನಿಯನ್ ಕಾಲದಲ್ಲಿ ಮಂಗಳದ ಹಲವೆಡೆಗಳಲ್ಲಿ ಲಾವಾ ಪ್ರವಾಹಗಳು ಉಂಟಾದವು.
ಈ ಮೇಲಿನ ವಿಂಗಡಣೆಯಲ್ಲದೆ, ಮಂಗಳದ ಭೂಚಾರಿತ್ರಿಕ ಕಾಲಗಳ ಒಂದು ಪರ್ಯಾಯ ವಿಂಗಡಣೆಯೂ ಲಭ್ಯವಿದೆ. ಈ ವಿಂಗಡಣೆಯು ಮಾರ್ಸ್ ಎಕ್ಸ್‌ಪ್ರೆಸ್ ಪರಿಭ್ರಮಕದ ಒಮೇಗಾ ನಸುಗೆಂಪು ಕಿರಣ ಖನಿಜ ವರ್ಣಪಟಲಮಾಪಕದಿಂದ ಲಭ್ಯವಿರುವ ಫಲಿತಾಂಶಗಳ ಮೇಲೆ ಆಧಾರಿತವಾಗಿದೆ.
[ಬದಲಾಯಿಸಿ] ಕಕ್ಷೆ ಮತ್ತು ಪರಿಭ್ರಮಣ
ಮಂಗಳದ ಕಕ್ಷೆಗೆ ಎದ್ದು ಕಾಣುವಂಥ ಸುಮಾರು 9% ಕೇಂದ್ರ ಚ್ಯುತಿ ಇದೆ. ಸೌರ ಮಂಡಲದಲ್ಲಿ ಬುಧ ಗ್ರಹವನ್ನು ಬಿಟ್ಟರೆ ಇನ್ನಾವ ಗ್ರಹವೂ ಇಷ್ಟು ಹೆಚ್ಚ್ಚಿನ ಕೇಂದ್ರ ಚ್ಯುತಿಯನ್ನು ಹೊಂದಿಲ್ಲ. ಸೂರ್ಯನಿಂದ ಮಂಗಳದ ಸರಾಸರಿ ದೂರ ಸುಮಾರು 23 ಕೋಟಿ ಕಿ.ಮೀ. (1.5 ಖಗೋಳ ಮಾನ) ಮತ್ತು ಸರಾಸರಿ ಪರಿಭ್ರಮಣ ಕಾಲ 687 ಭೂಮಿ ದಿನಗಳು. ಮಂಗಳದ ಮೇಲೆ ದಿನವು ಭೂಮಿಯ ದಿನಕ್ಕಿಂತ ಸ್ವಲ್ಪವೇ ದೊಡ್ಡದಾಗಿದೆ: 24 ಘಂಟೆ, 39 ನಿಮಿಷ, ಮತ್ತು 35.244 ಕ್ಷಣಗಳು.
ಮಂಗಳದ ಅಕ್ಷಾ ವಾಲಿಕೆ 25.29 ಡಿಗ್ರಿಗಳು. ಇದು ಸುಮಾರು ಭೂಮಿಯ ಅಕ್ಷಾ ವಾಲಿಕೆಯಷ್ಟೇ ಇದೆ. ಈ ಕಾರಣದಿಂದಾಗಿ ಭೂಮಿಯಂತೆ ಮಂಗಳದ ಮೇಲೂ ಋತುಗಳು ಕಂಡುಬರುತ್ತವೆ. ಆದರೆ, ಮಂಗಳದ ವರ್ಷವು ಭೂಮಿಯ ವರ್ಷದ ಸುಮಾರು ಎರಡು ಪಟ್ಟು ಇರುವುದರಿಂದ ಮಂಗಳದ ಮೇಲೆ ಋತುಗಳೂ ಭೂಮಿಯ ಋತುಗಳಿಗಿಂತ ಹೆಚ್ಚು ಕಾಲ ಇರುತ್ತವೆ.
[ಬದಲಾಯಿಸಿ] ಉಪಗ್ರಹಗಳು
ಮಂಗಳ ಗ್ರಹಕ್ಕೆ ಫೋಬೋಸ್ ಮತ್ತು ಡೀಮೋಸ್ ಎಂಬ ಎರಡು ಸಣ್ಣ ನೈಸರ್ಗಿಕ ಉಪಗ್ರಹಗಳಿವೆ. ಮಂಗಳವನ್ನು ಅತಿ ಸಮೀಪದಲ್ಲಿ ಪರಿಭ್ರಮಿಸುವ ಈ ಎರಡು ಉಪಗ್ರಹಗಳು ಮುಂಚೆ ಅಲೆದಾಡುವ ಆಕಾಶಕಾಯಗಳಾಗಿದ್ದವೆಂದು (asteroids) ಊಹಿಸಲಾಗಿದೆ.
ಇವನ್ನು ಕ್ರಿ.ಶ.1887 ರಲ್ಲಿ Asaph Hall ಕಂಡು ಹಿಡಿದರು. ಗ್ರೀಕ್ ಪುರಾಣದಲ್ಲಿ ಉಲ್ಲೇಖಿತವಾಗಿರುವ ಫೋಬೋಸ್ (ಅರ್ಥಾತ್: ಭಯ) ಮತ್ತು ಡೀಮೋಸ್ (ಅರ್ಥಾತ್: ಆತಂಕ) ಎಂಬ ಎರಡು ಪಾತ್ರಗಳ ಹೆಸರನ್ನು ಈ ಉಪಗ್ರಹಗಳಿಗೆ ಇಡಲಾಗಿದೆ. ಗ್ರೀಕ್ ಪುರಾಣದ ಪ್ರಕಾರ ಇವರಿಬ್ಬರೂ ತಮ್ಮ ತಂದೆ ಹಾಗೂ ಯುದ್ಧದ ದೇವತೆಯಾದ ಏರೆಸ್‌ನ ಜೊತೆ ಕದನಕ್ಕೆ ಹೋದರಂತೆ. ಏರೆಸ್ ದೇವತೆಯನ್ನು ರೋಮನ್ನರು "ಮಾರ್ಸ್" ಎಂದೂ ಕರೆಯುತ್ತಿದ್ದರು.
ಮಂಗಳದ ಮೇಲ್ಮೈನಿಂದ ನೋಡಿದಾಗ, ಈ ಎರಡು ಉಪಗ್ರಹಗಳ ಚಲನೆಗಳು ನಮ್ಮ ಭೂಮಿಯ ಚಂದ್ರನ ಚಲನೆಗಿಂತ ಬಹಳ ಭಿನ್ನವಾಗಿ ಕಂಡುಬರುತ್ತವೆ. ಫೋಬೋಸ್ ಪಶ್ಚಿಮದಲ್ಲಿ ಉದಯಿಸಿ ಪೂರ್ವದಲ್ಲಿ ಮುಳುಗುತ್ತದೆ. ಮುಳುಗಿ 11 ಘಂಟೆಗಳ ತರುವಾಯ ಮತ್ತೆ ಉದಯಿಸುತ್ತದೆ. ಡೀಮೋಸ್ ನಿರೀಕ್ಷೆಯಂತೆ ಪೂರ್ವದಲ್ಲಿ ಉದಯಿಸಿದರೂ, ಬಹಳ ನಿಧಾನವಾಗಿ ಮೇಲೇರುತ್ತದೆ. ಇದರ ಪರಿಭ್ರಮಣ ಕಾಲ ಕೇವಲ 30 ಘಂಟೆಗಳಾಗಿದ್ದರೂ, ಮಂಗಳದ ದೈನಂದಿಕ ಚಲನೆಯ ಕಾರಣದಿಂದಾಗಿ, 2.7 ದಿನಗಳ ಬಳಿಕ, ನಿಧಾನವಾಗಿ ಪಶ್ಚಿಮದಲ್ಲಿ ಮುಳುಗುತ್ತದೆ. ಡೀಮೋಸ್ ಮತ್ತೊಮ್ಮೆ ಉದಯಿಸಲು ಇನ್ನೂ 2.7 ದಿನಗಳೇ ಬೇಕಾಗುತ್ತವೆ.
ಫೋಬೋಸ್‌ನ ಕಕ್ಷೆಯು ಸಮಕಾಲಿಕ ಕಕ್ಷೆಯ (synchronous orbit) ಎತ್ತರಕ್ಕಿಂತ ಕೆಳಗಿರುವುದರಿಂದ, ಮಂಗಳದ ಗುರುತ್ವ ಬಲವು ಫೋಬೋಸ್‌ನನ್ನು ನಿಧಾನವಾಗಿ ತನ್ನೆಡೆಗೆ ಸೆಳೆಯುತ್ತಿದೆ. ಇದರಿಂದಾಗಿ ಇನ್ನು ಸುಮಾರು 5 ಕೋಟಿ ವರ್ಷಗಳಲ್ಲಿ ಫೋಬೋಸ್ ಮಂಗಳದ ಮೇಲೆ ಅಪ್ಪಳಿಸುತ್ತದೆ ಅಥವಾ ಮಂಗಳದ ಸುತ್ತ ಉಂಗುರಾಕಾರದಲ್ಲಿ ಪುಡಿಯಾಗುತ್ತದೆ ಎಂದು ಅಂದಾಜು ಮಾಡಲಾಗಿದೆ.
[ಬದಲಾಯಿಸಿ] ಜೀವರಾಶಿ
ಹಿಂದೊಂದು ಕಾಲದಲ್ಲಿ ಮಂಗಳವು ಪ್ರಸ್ತುತಕ್ಕಿಂತ ಗಮನಾರ್ಹವಾಗಿ ಹೆಚ್ಚು ವಾಸಯೋಗ್ಯವಾಗಿತ್ತೆನ್ನುವುದಕ್ಕೆ ಕೆಲವು ಸಾಕ್ಷ್ಯಾಧಾರಗಳಿವೆ. ಆದರೆ ಯಾವುದೇ ಕಾಲದಲ್ಲಿ ಮಂಗಳದ ಮೇಲೆ ಜೀವಿಗಳು ಅಸ್ತಿತ್ವದಲ್ಲಿದ್ದವೆ? ಎಂಬುದು ಇನ್ನೂ ಉತ್ತರಿಸಲಾಗದ ಪ್ರಶ್ನೆ. 70ರ ದಶಕದ ನಡುವೆ ಉಡಾಯಿಸಲಾದ ವೈಕಿಂಗ್ ಅನ್ವೇಷಕಗಳು ಮಂಗಳದ ಮೇಲಿಳಿದು ಅಲ್ಲಿ ಸೂಕ್ಷ್ಮ ಜೀವಿಗಳ ಇರುವಿಕೆಯನ್ನು ಕಂಡುಹಿಡಿಯಲು ಮಂಗಳದ ಮಣ್ಣಿನೊಂದಿಗೆ ಕೆಲವು ಪ್ರಯೋಗಗಳನ್ನು ನಡೆಸಿದವು. ಈ ಪ್ರಯೋಗಗಳ ಫಲಿತಾಂಶಗಳು ಆಶಾದಾಯಕವಾಗಿದ್ದವಾದರೂ, ತದನಂತರ ಹಲವು ವಿಜ್ಞಾನಿಗಳು ಈ ಫಲಿತಾಂಶಗಳನ್ನು ಅಲ್ಲಗಳೆದರು. ಇಂದಿಗೂ ಇವುಗಳ ಬಗ್ಗೆ ವಾದ-ವಿವಾದಗಳು ನಡೆಯುತ್ತಲೇ ಇವೆ.
ALH84001 ಎಂಬ ಹೆಸರಿನ ಉಲ್ಕೆಯಲ್ಲಿ ಸಾವಯವ ಸಂಯುಕ್ತ ವಸ್ತುಗಳು ಕಂಡುಬಂದಿವೆ. ಈ ಉಲ್ಕೆಯು ಮಂಗಳದಿಂದ ಭೂಮಿಗೆ ಬಂದಿತು ಎಂದು ನಂಬಲಾಗಿದೆ. ಸುಮಾರು 1.5 ಕೋಟಿ ವರ್ಷಗಳ ಹಿಂದೆ ಉಲ್ಕೆಯ ಸ್ಫೋಟದಿಂದ ಈ ALH84001 ಬಾಹ್ಯಾಕಾಶಕ್ಕೆ ಸಿಡಿಯಿತೆಂದೂ, ಉಲ್ಕಾ ಸ್ಫೋಟಕ್ಕೆ ಮುನ್ನ ಮಂಗಳದ ಮೇಲಿದ್ದ ಪ್ರಾಚೀನ ಸೂಕ್ಷ್ಮ ಜೀವಿಗಳೇ ಸಾವಯವ ವಸ್ತುಗಳನ್ನು ಶೇಖರ ಮಾಡಿದ್ದವೆಂದೂ ವಿಜ್ಞಾನಿಗಳು ನಿರ್ಧರಿಸಿದರು. ಸಣ್ಣ ಪ್ರಮಾಣದಲ್ಲಿ ಕಂಡುಬಂದ ಮೀಥೇನ್ ಮತ್ತು ಫಾರ್ಮಾಲ್ಡಿಹೈಡ್ ಸಂಯುಕ್ತಗಳು ಮಂಗಳದ ಮೇಲೆ ಜೀವಿಗಳಿರುವುದಕ್ಕೆ ಸಾಕ್ಷಿ ಎಂದೂ ಸೂಚಿಸಲಾಗಿದೆ. ಜೀವಿಗಳಿಲ್ಲದಿದ್ದರೆ ಈ ವಸ್ತುಗಳು ಮಂಗಳದ ವಾಯುಮಂಡಲದಲ್ಲಿ ಬಹುಬೇಗನೆ ಪತನವಾಗುತ್ತಿದ್ದವು. ಆದರೆ ಈ ವಸ್ತುಗಳು ಅಗ್ನಿಪರ್ವತಗಳ ಚಟುವಟಿಕೆಯಿಂದ ಅಥವಾ ಗ್ರಹದ ಒಳಗಿನಿಂದಲೂ ಮೇಲ್ಮೈಗೆ ಬಂದಿರಬಹುದು.
ಸಾಧಾರಣವಾಗಿ ಮಂಗಳವನ್ನು ವಾಸಯೋಗ್ಯವಾಗಿ ಪರಿಗಣಿಸಲು ಕೆಲವು ಕಾರಣಗಳಿದ್ದರೂ, ವಾಸದ ಮುನ್ನ ಎದುರಿಸಬೇಕಾದ ಹಲವಾರು ಸಮಸ್ಯೆಗಳೂ ಇವೆ. ಮಂಗಳವು ಸೂರ್ಯನ ವಾಸಯೋಗ್ಯ ವಲಯದ ಮಿತಿಯಿಂದ 0.5 ಖಗೋಳಮಾನ ಆಚೆಯಿರುವುದರಿಂದ ಇಲ್ಲಿ ನೀರು ಸದಾಕಾಲ ಹೆಪ್ಪುಗಟ್ಟಿ ಮಂಜಾಗಿರುತ್ತದೆ. ಹೀಗಿದ್ದರೂ, ಹಿಂದಿನ ಕಾಲದಲ್ಲಿ ಇಲ್ಲಿ ನೀರು ಜಲರೂಪದಲ್ಲಿ ಇತ್ತೆಂಬುದಕ್ಕೆ ಸಾಕ್ಷಿಗಳಿವೆ. ಹೀಗಾಗಿ ಇದು ಬಹಳ ದೊಡ್ಡ ಸಮಸ್ಯೆಯಲ್ಲವೆಂದು ಪರಿಗಣಿಸಬಹುದು. ಇದಕ್ಕಿಂತ ದೊಡ್ಡದಾದ ಗಂಭೀರ ಸಮಸ್ಯೆಗಳೆಂದರೆ: ಮಂಗಳದ ಮೇಲೆ ಕಾಂತಕ್ಷೇತ್ರ ಇಲ್ಲದಿರುವುದು ಹಾಗೂ ಅತಿ ವಿರಳವಾದ ವಾಯುಮಂಡಲ. ಇವುಗಳ ಪರಿಣಾಮ ಮೇಲ್ಮೈನ ಮೇಲೆ ಶಾಖದ ಸಂವಹನ ಉಂಟಾಗದಿರುವುದು, ಸೂರ್ಯನ ವಿಕಿರಣ ಮತ್ತು ಉಲ್ಕೆಗಳಿಂದ ರಕ್ಷಣೆ ಸಿಗದಿರುವುದು, ನೀರನ್ನು ಜಲರೂಪದಲ್ಲಿಟ್ಟುಕೊಳ್ಳಲು ಅಗತ್ಯವಾದಷ್ಟು ವಾಯು ಒತ್ತಡ ಇಲ್ಲದಿರುವುದು (ಬದಲಿಗೆ, ಸ್ವಲ್ಪ ಶಾಖ ಸಿಕ್ಕಾಕ್ಷಣ ಘನೀಕೃತ ಮಂಜು ನೇರವಾಗಿ ನೀರಾವಿಯಾಗಿ ಮಾರ್ಪಾಡಾಗುತ್ತದೆ), ಮುಂತಾದವು.
ಇದಲ್ಲದೆ, ಮಂಗಳದಲ್ಲಿ ಅಗ್ನಿಪರ್ವತಗಳ ಚಟುವಟಿಕೆಗಳು ಸಂಪೂರ್ಣವಾಗಿ ಅಥವಾ ಬಹುಮಟ್ಟಿಗೆ ನಿಂತುಹೋಗಿವೆ. ಇದರ ಕಾರಣದಿಂದಾಗಿ ಮೇಲ್ಮೈ ಮತ್ತು ಗ್ರಹದ ಒಳಭಾಗಗಳ ನಡುವೆ ಖನಿಜಗಳ ಚಲನೆ ನಡೆಯುತ್ತಿಲ್ಲ.
[ಬದಲಾಯಿಸಿ] ಅನ್ವೇಷಣೆ
ಗ್ರಹದ ಮೇಲ್ಮೈ, ಹವಾಮನ ಮತ್ತು ಒಳಭಾಗಗಳನ್ನು ಅಧ್ಯಯನ ಮಾಡಲು ಸೋವಿಯೆತ್ ರಷ್ಯಾ,ಅಮೆರಿಕಾ ಸಂಯುಕ ಸಂಸ್ಥಾನ, ಯೂರೋಪ್, ಮತ್ತು ಜಪಾನ್ನಿಂದ, ಅನ್ವೇಷಕಗಳು, ಪರ್ಯಟಕಗಳು, ಪರಿಭ್ರಮಕಗಳು ಸೇರಿದಂತೆ ಹಲವಾರು ಬಾಹ್ಯಾಕಾಶ ನೌಕೆಗಳನ್ನು ಭೂಮಿಯಿಂದ ಮಂಗಳದತ್ತ ಕಳುಹಿಸಲಾಗಿದೆ.
ಇವುಗಳಲ್ಲಿ ಸುಮಾರು 3ನೇ 2ರಷ್ಟು ನೌಕೆಗಳು ತಮ್ಮ ಉದ್ದಿಷ್ಟ ಕಾರ್ಯವನ್ನು ಪೂರ್ಣಗೊಳಿಸುವುದಕ್ಕೆ ಮುನ್ನ ಅಥವಾ ಆರಂಭಿಸುವುದಕ್ಕೆ ಮುನ್ನವೇ ವಿಫಲವಾಗಿಹೋಗಿವೆ. ಈ ವೈಫಲ್ಯತೆಗಳಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಉಂಟಾದುವು. ಆದರೆ, ಇನ್ನು ಹಲವು ನೌಕೆಗಳು ಅರ್ಥವಾಗದ ಯಾವುದೋ ಕಾರಣದಿಂದ ವಿಫಲವಾಗಿಯೋ,ಭೂಮಿಯ ಜೊತೆ ಸಂಪರ್ಕ ಕಡಿದುಕೊಂಡೋ ಬಾಹ್ಯಾಕಾಶದಲ್ಲಿ ಕಳೆದುಹೋಗಿವೆ. ಈ ರೀತಿ ಸಾಕಷ್ಟು ನೌಕೆಗಳು ಕಳೆದು ಹೋಗಿರುವುದರಿಂದ ಕೆಲವು ಸಂಶೋಧಕರು ತಮಾಷೆಯಾಗಿ ಭೂಮಿ-ಮಂಗಳದ ನಡುವೆ "ಬರ್ಮುಡಾ ತ್ರಿಕೋಣ", ಅಥವಾ ಅಂಗಾರಕ ಶಾಪದ ಬಗ್ಗೆ ಮಾತಾಡುತ್ತಾರೆ ಮತ್ತು ಮಂಗಳಕ್ಕೆ ಹೊರಟ ನೌಕೆಗಳನ್ನು ತಿನ್ನುವ ಒಂದು "ಬೃಹತ್ ಬ್ರಹ್ಮಾಂಡ ಪಿಶಾಚಿ"ಯನ್ನು ಉಲ್ಲೇಖಿಸುತ್ತಾರೆ.[೫]
[ಬದಲಾಯಿಸಿ] ಹಿಂದಿನ ಅನ್ವೇಷಣಾ ಯಾತ್ರೆಗಳು
ಮಂಗಳದ ಸಮೀಪದಲ್ಲಿ ಹಾದುಹೋದ ಮೊಟ್ಟಮೊದಲ ನೌಕೆಯೆಂದರೆ 1964ರಲ್ಲಿ ನಾಸಾ ಉಡಾಯಿಸಿದ ಮ್ಯಾರಿನರ್ 4. ಮಂಗಳದ ನೆಲವನ್ನು ಮುಟ್ಟಿದ ಮೊದಲ ಮಾನವ ನಿರ್ಮಿತ ವಸ್ತುಗಳೆಂದರೆ ರಷ್ಯಾ ಮಂಗಳ ಅನ್ವೇಷಣಾ ಕಾರ್ಯಕ್ರಮದ ಮೂಲಕ 1971ರಲ್ಲಿ ಉಡಾಯಿಸಲಾದ Mars 2 ಮತ್ತು Mars 3 ಎಂಬ ಹೆಸರಿನ ಎರಡು ಅನ್ವೇಷಕಗಳು. ಆದರೆ ಮಂಗಳದ ಮೇಲ್ಮೈ ತಲುಪಿದ ಕೆಲವೇ ಕ್ಷಣಗಳಲ್ಲಿ ಭೂಮಿಯ ಜೊತೆ ಈ ಎರಡೂ ಅನ್ವೇಷಕಗಳ ಸಂಪರ್ಕ ಕಡಿದುಹೋಯಿತು. ನಂತರ 1975ರಲ್ಲಿ ನಾಸಾ ವೈಕಿಂಗ್ ಕಾರ್ಯಕ್ರಮದ ಉಡಾವಣೆಗಳು ಶುರುವಾದವು.
ಈ ಉಡಾವಣೆಗಳಲ್ಲಿ ಇಳಿಯುವ ಭಾಗಗಳುಳ್ಳ ಎರಡು ಪರಿಭ್ರಮಕಗಳು ಸೇರಿದ್ದವು. ಈ ಎರಡು ಪರಿಭ್ರಮಕಗಳ ಇಳಿಯುವ ಭಾಗಗಳೂ 1976ರಲ್ಲಿ ಯಶಸ್ವಿಯಾಗಿ ಮಂಗಳದ ಮೇಲಿಳಿದು 6 ವರ್ಷ (Viking 1) ಮತ್ತು 3 ವರ್ಷಗಳವರೆಗೆ (Viking 2) ಕೆಲಸ ಮಾಡಿದವು. ಇದಲ್ಲದೆ ಮೊದಲನೇ ಬಾರಿಗೆ ಈ ವೈಕಿಂಗ್ ಇಳಿಭಾಗಗಳು ಮಂಗಳದ ಬಣ್ಣದ ಛಾಯಾಚಿತ್ರಗಳನ್ನು ಭೂಮಿಗೆ ಕಳಿಸಿದವು.[೬]
ಇವು ಮಂಗಳದ ಮೇಲ್ಮೈ ಸಮೀಕ್ಷೆ ಮಾಡಿ ಮೇಲ್ಮೈ ನಕ್ಷೆಯನ್ನು ತಯಾರು ಮಾಡಿದವು. ಈ ತಯಾರಿಕೆಗಳು ಎಷ್ಟು ಸ್ಫುಟವಾಗಿದ್ದವೆಂದರೆ, ಇಂದಿಗೂ ಈ ಚಿತ್ರ ಮತ್ತು ನಕ್ಷೆಗಳನ್ನು ಒಮ್ಮೊಮ್ಮೆ ಉಪಯೋಗಿಸಲಾಗುತ್ತಿದೆ. ಮಂಗಳ ಮತ್ತದರ ಎರಡು ಉಪಗ್ರಹಗಳನ್ನು ಅಧ್ಯಯನ ಮಾಡಲೆಂದು 1988ರಲ್ಲಿ ರಷ್ಯಾದಿಂದ Phobos 1 ಮತ್ತು 2 ಅನ್ವೇಷಕಗಳನ್ನು ಕಳಿಸಲಾಯಿತು. ದುರದೃಷ್ಟವಶಾತ್, Phobos 1ರ ಮಾರ್ಗಮಧ್ಯದಲ್ಲೇ ಅದರ ಜೊತೆ ಸಂಪರ್ಕ ಕಡಿದುಹೋಯಿತು. Phobos 2 ಯಶಸ್ವಿಯಾಗಿ ಮಂಗಳ ಮತ್ತುಗಳ ಛಾಯಾಚಿತ್ರಗಳನ್ನು ತೆಗೆಯಿತಾದರೂ, ಫೋಬೋಸ್‌ನ ಮೇಲೆ ತನ್ನ ಒಂದು ಭಾಗವನ್ನು ಇಳಿಸುವುದಕ್ಕೆ ಸ್ವಲ್ಪವೇ ಮುಂಚೆ ವಿಫಲವಾಯಿತು.
[ಬದಲಾಯಿಸಿ] ಈಗಿನ ಅನ್ವೇಷಣಾ ಯಾತ್ರೆಗಳು
1992ರಲ್ಲಿ Mars Observer ಪರಿಭ್ರಮಕವು ವಿಫಲವಾದ ಬಳಿಕ, 1996ರಲ್ಲಿ ನಾಸಾ Mars Global Surveyorನ್ನು ಉಡಾಯಿಸಿತು. ತನ್ನ ಮುಖ್ಯ ಧ್ಯೇಯವಾದ ಸಮೀಕ್ಷಾಕಾರ್ಯವನ್ನು 2001ರ ಪ್ರಾರಂಭದ ಹೊತ್ತಿಗೆ ಮುಗಿಸಿದ ಈ ಯಾತ್ರೆಯು ಸಂಪೂರ್ಣವಾಗಿ ಯಶಸ್ವಿಯಾಯಿತು. Surveyor ಉಡಾವಣೆಯ ಒಂದೇ ತಿಂಗಳ ತರುವಾಯ, ನಾಸಾ Mars Pathfinderನ್ನು ಉಡಾಯಿಸಿತು. Pathfinder ಕೊಂಡೊಯ್ದಿದ್ದ ಯಂತ್ರಮಾನವಯುಕ್ತ ಅನ್ವೇಷಣಾ ವಾಹನವೊಂದು ಮಂಗಳದ Ares Vallisನಲ್ಲಿ ಇಳಿಯಿತು. ಅತ್ಯಂತ ಯಶಸ್ವಿಯಾದ ಈ ಯಾತ್ರೆಗೆ ಬಹಳ ಪ್ರಸಿದ್ಧಿ ಮತ್ತು ಪ್ರಚಾರಗಳು ಸಿಕ್ಕವು. ಈ ಅನ್ವೇಷಕವು ಭೂಮಿಗೆ ಕಳುಹಿಸಿದ ಹಲವು ಅದ್ಭುತ ಛಾಯಚಿತ್ರಗಳೂ ಈ ಪ್ರಸಿದ್ಧಿಗೆ ಒಂದು ಕಾರಣ.[೭]
2001ರಲ್ಲಿ ನಾಸಾ, ಯಶಸ್ವಿಯಾದ Mars Odyssey ಪರಿಭ್ರಮಕವನ್ನು ಉಡಾಯಿಸಿತು. ಇದು ಆಗಸ್ಟ್ 2006ರಲ್ಲಿ ಸಿಕ್ಕಿದ ಮಾಹಿತಿಯ ಪ್ರಕಾರ ಇನ್ನೂ ಮಂಗಳವನ್ನು ಪರಿಭ್ರಮಿಸುತ್ತಿದೆ. Odysseyಯ ಗಾಮಾ ಕಿರಣ ವರ್ಣಪಟಲಮಾಪಕವು ಮಂಗಳದ ಬಾಹ್ಯ ಶಿಲಾಪದರವಾದ regolithನಲ್ಲಿ ಗಮನಾರ್ಹ ಪ್ರಮಾಣದಲ್ಲಿ ಮೂಲರೂಪಿ ಜಲಜನಕವನ್ನು ಪತ್ತೆಹಚ್ಚಿದೆ. ಘನೀಕೃತ ನೀರಿನ ದೊಡ್ಡ ಶೇಖರಣೆಗಳು ಈ ಜಲಜನಕದ ಇರುವಿಕೆಗೆ ಕಾರಣ ಎಂದು ನಂಬಲಾಗಿದೆ.[೮] 2003ರಲ್ಲಿ ಮಂಗಳ ಎಕ್ಸ್‌ಪ್ರೆಸ್ ಪರಿಭ್ರಮಕ ಮತ್ತು Beagle 2 ಎಂಬ ಹೆಸರಿನ ಇಳಿಯುವ ಭಾಗವನ್ನೊಳಗೊಂಡ ಮಂಗಳ ಎಕ್ಸ್‌ಪ್ರೆಸ್ ನೌಕೆಯನ್ನು ಐರೋಪ್ಯ ಬಾಹ್ಯಾಕಾಶ ಸಂಸ್ಥೆಯು ಉಡಾಯಿಸಿತು. ಇಳಿಯುತ್ತಿರುವಾಗ ವಿಫಲವಾದಂತೆ ಕಂಡುಬಂದ Beagle 2 ವನ್ನು 2004ದ ಫೆಬ್ರವರಿಯಲ್ಲಿ ಕಳೆದುಹೋಯಿತೆಂದು ಘೋಷಿಸಲಾಯಿತು.[೯] 2004ರ ಪ್ರಾರಂಭದಲ್ಲಿ Planetary Fourier Spectrometer ತಂಡವು ಮಂಗಳದ ವಾಯುಮಂಡಲದಲ್ಲಿ ಮೀಥೇನ್ ವಾಯುವನ್ನು ಪತ್ತೆಹಚ್ಚಲಾಗಿರುವುದೆಂದು ಘೋಷಿಸಿತು. ಜೂನ್ 2006ರಲ್ಲಿ ಐರೋಪ್ಯ ಬಾಹ್ಯಾಕಾಶ ಸಂಸ್ಥೆಯು ಮಂಗಳದಲ್ಲಿ ಧ್ರುವಾರುಣ ಜ್ಯೋತಿಯ ಅರಿವನ್ನು ಘೋಷಿಸಿತು.[೧೦]
ಇದಲ್ಲದೆ 2003ರಲ್ಲಿ ನಾಸಾ Spirit (MER-A) ಮತ್ತು Opportunity (MER-B) ಎಂಬ ಹೆಸರಿನ ಅವಳಿ ಮಂಗಳಾನ್ವೇಷಣ ಪರ್ಯಟಕಗಳನ್ನು ಉಡಾಯಿಸಿತು. ಯಶಸ್ವಿಯಾಗಿ ಜನವರಿ 2004ರಲ್ಲಿ ಮಂಗಳವನ್ನು ತಲುಪಿದ ಈ ಎರಡೂ ತಮ್ಮ ಯಾತ್ರೆಯ ಎಲ್ಲ ನಿರೀಕ್ಷೆಗಳನ್ನೂ ಮುಟ್ಟಿವೆ ಅಥವಾ ನಿರೀಕ್ಷೆ ಮೀರಿ ಕಾರ್ಯ ನಿರ್ವಹಿಸಿವೆ.
ಈ ಅನ್ವೇಷಕಗಳಿಂದ ಹೊರಬಂದ ಪ್ರಮುಖ ವೈಜ್ಞಾನಿಕ ಫಲಿತಾಂಶಗಳಲ್ಲಿ ಒಂದೆಂದರೆ: ಮಂಗಳದ ಮೇಲೆ ಒಂದು ಕಾಲದಲ್ಲಿ ನೀರು ದ್ರವರೂಪದಲ್ಲಿತ್ತು ಎಂಬುದರ ಬಗ್ಗೆ ನಿರ್ಣಾಯಕವಾದ ಸಾಕ್ಷಿ. ಧೂಳಿನ ಮಾರುತಗಳು ಈ ಎರಡು ಅನ್ವೇಷಕಗಳ ಸೌರಫಲಕಗಳನ್ನು ಒಮ್ಮೊಮ್ಮೆ ಶುಚಿಗೊಳಿಸಿ ಫಲಕಗಳ ಆಯಸ್ಸನ್ನು ಹೆಚ್ಚಿಸಿವೆ.[೧೧] ಎರಡು ವರ್ಷಗಳ ಕಾಲ ವೈಜ್ಞಾನಿಕ ಸಮೀಕ್ಷೆಯೊಂದನ್ನು ನಿರ್ವಹಿಸಲು ಆಗಸ್ಟ್ 12, 2005ರಂದು ನಾಸಾ ಮಂಗಳ ಬೇಹುಗಾರಿಕಾ ಪರಿಭ್ರಮಕವನ್ನು ಮಂಗಳದತ್ತ ಹಾರಿಸಲಾಯಿತು. ಮಂಗಳದ ಮೇಲ್ಮೈ ನಕ್ಷಾ ತಯಾರಿಕೆ ಮತ್ತು ಮುಂಬರುವ ಯಾತ್ರೆಗಳಿಗೆ ಸೂಕ್ತವಾದ ಇಳಿಯುವ ತಾಣಗಳನ್ನು ಕಂಡುಹಿಡಿಯುವುದು ಈ ಪರಿಭ್ರಮಕದ ಉದ್ದೇಶಗಳು. ಇದು ಮಾರ್ಚ್ 10, 2006ರಂದು ತನ್ನ ಪರಿಭ್ರಮಣೆಯನ್ನು ಶುರುಮಾಡಿತು. 2007ರಲ್ಲಿ ಉಡಾವಣೆಯ ನಿರೀಕ್ಷೆಯಲ್ಲಿರುವ ನಾಸಾ ಫೀನಿಕ್ಸ್ನೌಕೆಯು ಮುಂದಿನ ನಿಗದಿತ ಮಂಗಳಯಾನ.[೧೨]
[ಬದಲಾಯಿಸಿ] ಮುಂದಿನ ಅನ್ವೇಷಣಾ ಯೋಜನೆಗಳು
ಭವಿಷ್ಯದಲ್ಲಿ ಮಾನವರಹಿತ ಮಂಗಳಯಾನದ ಯೋಜನೆಗಳಲ್ಲಿ ಈ ಕೆಳಗಿನವು ಸೇರಿವೆ: 2007ರಲ್ಲಿ ಫೀನಿಕ್ಸ್ ನೌಕೆ, ನಂತರ 2009ರಲ್ಲಿ ಮಂಗಳ ವಿಜ್ಞಾನ ಪ್ರಯೋಗಶಾಲೆ, ಫೋಬೋಸ್‌ನಿಂದ ಮಣ್ಣು-ಕಲ್ಲುಗಳ ಮಾದರಿಗಳನ್ನು ಭೂಮಿಗೆ ಮರಳಿ ತರುವ ಉದ್ದೇಶವಿರುವ Phobos-Grunt ಯಾನ. ಇವಲ್ಲದೆ ಇತರ ಯಾನಗಳನ್ನು ಪ್ರಸ್ತಾಪಿಸಲಾಗಿದ್ದರೂ, ಇವು ಯಾವುದನ್ನೂ ಇದುವರೆಗೆ ದೃಢಪಡಿಸಲಾಗಿಲ್ಲ.
2004ರಲ್ಲಿ ಅಮೆರಿಕಾದ ಅಧ್ಯಕ್ಷ ಜಾರ್ಜ್ ಬುಷ್‌ರವರು ಘೋಷಿಸಿದ ಬಾಹ್ಯಾಕಾಶ ಅನ್ವೇಷಣಾ ಆಕಾಂಕ್ಷೆಯಲ್ಲಿ ಮಾನವಸಹಿತ ಮಂಗಳಯಾನಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ.[೧೩] 2030 ಮತ್ತು 2035ರ ನಡುವೆ ಮಂಗಳದ ಮೇಲೆ ಮಾನವರನ್ನು ತಲುಪಿಸಬಹುದೆಂದು ಐರೋಪ್ಯ ಬಾಹ್ಯಾಕಾಶ ಸಂಸ್ಥೆಯು ಆಶಾದಾಯಕವಾಗಿದೆ. ಇದಕ್ಕಿಂತ ಮೊದಲು ಒಂದಕ್ಕಿಂತ ಒಂದು ದೊಡ್ಡ ಅನ್ವೇಷಕಗಳನ್ನು ಹಾರಿಸಲಾಗುತ್ತದೆ. ಇವುಗಳಲ್ಲಿ ಮೊದಲನೆಯದು 2013ರಲ್ಲಿ ಹಾರಿಸಲಾಗುವ ExoMars ಅನ್ವೇಷಕ.[೧೪][೧೫] ಇದರ ನಂತರ 'ಮಂಗಳ ಶಿಲಾಮಾದರಿ ಮರಳುವಿಕೆ ಯಾನ'ಗಳು ಶುರುವಾಗುತ್ತವೆ. ಇದೇರೀತಿಯಲ್ಲಿ, ಈ ಯಾನದ ಪೂರ್ವಸಿದ್ಧತೆಯ ಉದ್ದೇಶದಿಂದಾಗಿ 2020 ಮತ್ತು 2025ರ ನಡುವೆ ಗಗನಯಾತ್ರಿಗಳನ್ನು ಚಂದ್ರನತ್ತ ಕಳುಹಿಸಲಾಗುವುದು.
[ಬದಲಾಯಿಸಿ] ಉಲ್ಲೇಖಗಳು
- ↑ ನಾಸಾ ಮಂಗಳ ಪುಟ
- ↑ Mineral in Mars 'Berries' Adds to Water Story
- ↑ "New Map Provides More Evidence Mars Once Like Earth" - Oct. 12, 2005 en:Goddard Space Flight Center Press release. URL accessed March 17, 2006.
- ↑ APS X-rays reveal secrets of Mars' core
- ↑ ಬೃಹತ್ ಬ್ರಹ್ಮಾಂಡ ಪಿಶಾಚಿಯ ಹಸಿವು ಕಡಿಮೆಯಾಯಿತೇ?
- ↑ ಮಂಗಳಕ್ಕೆ ಇತರ ಯಾತ್ರೆಗಳು
- ↑ Mars Global Surveyor
- ↑ Odyssey Spacecraft Generates New Mars Mysteries
- ↑ Europe's Beagle 2 Mars Probe Stays Ominously Silent
- ↑ http://www.esa.int/SPECIALS/Mars_Express/SEMLQ71DU8E_0.html
- ↑ Mars Exploration Rovers- Science
- ↑ MRO: Science
- ↑ When do we get to Mars?
- ↑ ExoMars
- ↑ European Mars launch pushed back
ನಮ್ಮ ಸೌರವ್ಯೂಹ |
ಸೂರ್ಯ | ಬುಧ | ಶುಕ್ರ | ಭೂಮಿ (ಚಂದ್ರ) | ಮಂಗಳ | ಎಸ್ಟೆರೊಇಡ್ ಪಟ್ಟಿ |
ಗುರು | ಶನಿ | ಯುರೇನಸ್ | ನೆಪ್ಚೂನ್ | ಪ್ಲುಟೊ | ಕೈಪರ್ ಪಟ್ಟಿ | ಊರ್ಟ್ ಮೋಡ |