ಬಾಹುಬಲಿ
From Wikipedia
ಬಾಹುಬಲಿ ಅಥವಾ ಗೊಮ್ಮಟೇಶ್ವರ, ಜೈನ ಧರ್ಮದಲ್ಲಿ ಮೂಡಿ ಬರುವ ಪ್ರಸಿದ್ಧ ಹೆಸರು. ಶ್ರವಣ ಬೆಳಗೊಳದಲ್ಲಿ ಚಾವುಂಡರಾಯ (ಒಂದೇ ಕಲ್ಲಿನಲ್ಲಿ) ಕೆತ್ತಿಸಿದ ೫೮ ಅಡಿ ಎತ್ತರದ ಬಾಹುಬಲಿ ಪ್ರತಿಮೆ ಇರುವುದು, ಸುಮಾರು ೧೨ ವರ್ಷಗಳಿಗೊಮ್ಮೆ ಈ ಪ್ರತಿಮೆಗೆ ಮಹಾ ಮಸ್ತಕಾಭಿಷೇಕವನ್ನು ನೆರವೇರಿಸಲಾಗುತ್ತದೆ.
[ಬದಲಾಯಿಸಿ] ಕಥೆ
ಜೈನ ಧರ್ಮವನ್ನು ಉಪದೇಶಿಸಿದ ಮೊದಲನೆಯ ತೀರ್ಧ೦ಕರರು ವೃಷಭನಾಥರು. ಇವರ ಮಕ್ಕಳು ಭರತ ಮತ್ತು ಬಾಹುಬಲಿ. ವೃಷಭನಾಥರಿಗೆ ವೈರಾಗ್ಯ ಉ೦ಟಾದಾಗ ಭರತನನ್ನು ರಾಜನನ್ನಾಗಿ ಮತ್ತು ಬಾಹುಬಲಿಯನ್ನು ಯುವರಾಜನನ್ನಾಗಿ ಮಾಡಿ ತಪಸ್ಸಿಗೆ ತೆರಳಿದರು. ಸಕಲ ಕರ್ಮಗಳನ್ನು ಜಯಿಸಿ ಕೇವಲಜ್ಞಾನವನ್ನು ಪಡೆದು ಜನರಿಗೆ ಮುಕ್ತಿ ಮಾರ್ಗವನ್ನು ಉಪದೇಶಿಸುತ್ತಿದ್ದರು.
ರಾಜನಾದ ಭರತನು ದಿಗ್ವಿಜಯವನ್ನು ಮುಗಿಸಿಬರುವಾಗ ಆತನ ಚಕ್ರರತ್ನವು ಪುರ ಪ್ರವೇಶ ಮಾಡಲಿಲ್ಲ. ಭರತನು ತನ್ನ ತಮ್ಮ೦ದಿರನ್ನು ಜಯಿಸಿಲ್ಲವೆ೦ದು ಪುರೊಹಿತರು ಹೇಳಿದರು. ಕಾಣಿಕೆಗಳೊಡನೆ ಬರುವ೦ತೆ ತಮ್ಮ೦ದಿರಿಗೆ ಹೇಳಿಕಳಿಸಿದಾಗ ಬಾಹುಬಲಿಯನ್ನುಳಿದು ಇತರರು ವೃಷಭನಾಥರ ಬಳಿ ಹೋಗಿ ದೀಕ್ಷೆ ಪಡೆದರು.
ಬಾಹುಬಲಿಯು ತ೦ದೆಯ ಹೊರೆತು ಇನ್ನಾರಿಗೂ ತಲೆ ಬಾಗುವುದಿಲ್ಲವೆ೦ದು, ತ೦ದೆಯಿ೦ದ ತನಗೆ ದೊರೆತ ರಾಜ್ಯವನ್ನು ಕೊಡುವುದಿಲ್ಲವೆ೦ದೂ, ಇದಕ್ಕಾಗಿ ಯುದ್ಧಕ್ಕೆ ಸಹ ಸಿದ್ಧನೆ೦ದು ಭರತನ ದೂತರಿಗೆ ಹೇಳಿದನು. ಭರತನು ಈ ಸುದ್ದಿಯನ್ನು ಕೇಳಿ ಯುದ್ಧಕ್ಕೆ ಸಿದ್ಧನಾದನು. ಎರಡೂ ಸ್ಯೆನ್ಯಗಳು ಯುದ್ಧ ಪ್ರಾರ೦ಭಿಸುವ ಮು೦ಚೆ ಮ೦ತ್ರಿಗಳು ಯೋಚಿಸಿ ಭರತ, ಬಾಹುಬಲಿ ಇಬ್ಬರೂ ವಜ್ರದೇಹಿಗಳಾಗಿರುವುದರಿ೦ದ ವೃಥಾ ಸ್ಯೆನ್ಯ ನಾಶವಾಗುವುದಲ್ಲದೆ ಈ ಇಬ್ಬರಿಗೂ ಏನೂ ಆಗುವುದಿಲ್ಲ. ಆದ್ದರಿ೦ದ ಈ ಇಬ್ಬರ ಮಧ್ಯೆಯೆ ದೃಷ್ಟಿಯುದ್ಧ, ಜಲಯುದ್ಧ ಮತ್ತು ಮಲ್ಲಯುದ್ಧ ನಡೆಯಲಿ ಎ೦ದು ತೀರ್ಮಾನಿಸಿದರು.
ಕಣ್ಣ ರೆಪ್ಪೆಯಾಡಿಸದೆ ಒಬ್ಬರನ್ನೊಬ್ಬರು ನೋಡುವುದು ದೃಷ್ಟಿಯುದ್ಧ. ಒಬ್ಬರಿಗೊಬ್ಬರು ಮುಖಕ್ಕೆ ತಾಗುವ೦ತೆ ನೀರೆರೆಚುವುದು ಜಲಯುದ್ಧ. ಪರಸ್ಪರ ಬಾಹು ಯುದ್ಧ ಜಟ್ಟಿಕಾಳಗ ವಾಡುವುದು ಮಲ್ಲಯುದ್ಧ. ಈ ಮೂರೂ ಯುದ್ಧಗಳಲ್ಲಿ ಅಪ್ರತಿಮ ವೀರನಾದ ಬಾಹುಬಲಿಯೇ ಗೆದ್ದನು. ಅಣ್ಣ ಭರತನನ್ನು ಮಲ್ಲಯುದ್ಧದಲ್ಲಿ ಮೇಲೆತ್ತಿದ ಬಾಹುಬಲಿಗೆ ತಾನು ಹೀಗೆ ಮಾಡಬಾರದೆ೦ದೆನಿಸಿ ನಿಧಾನವಾಗಿ ಕೆಳಗಿಳಿಸಿದನು. ಅವಮಾನ ಹೊ೦ದಿದ ಭರತನು ತನ್ನ ಚಕ್ರವನ್ನು ಪ್ರಯೋಗಿಸಿದರೂ ಸಹ ಅದು ಬಾಹುಬಲಿಯ ಪ್ರದಕ್ಷಿಣೆ ಮಾಡಿ ಅವನ ಬಲಗಡೆನಿ೦ತಿತು.
ಬಾಹುಬಲಿ ವಿಜಯಿಯಾದನು. ಎಲ್ಲರೂ ಜಯಕಾರ ಮಾಡಿದರು. ಆದರೆ ಬಾಹುಬಲಿಗೆ ವೈರಾಗ್ಯ ಉ೦ಟಾಗಿ ರಾಜ್ಯವನ್ನು ತೊರೆದು ತ೦ದೆ ವೃಷಭನಾಥರ ಬಳಿ ದೀಕ್ಷೆಯನ್ನು ಪಡೆದು ತಪಸ್ಸಿಗೆ ತೊಡಗಿದನು.
ಬಹುಕಾಲ ತಪಸ್ಸು ಆಚರಿಸಿದರೂ ಕೇವಲಜ್ಞಾನವನ್ನು ಪಡೆಯಲಿಲ್ಲ. ಇದಕ್ಕೆ ತಾನು ಅಣ್ಣನ ಭೂಮಿಯಲ್ಲಿ ನಿ೦ತಿರುವೆನೆ೦ಬ ಚಿ೦ತೆಯೇ ಕಾರಣವಾಗಿತ್ತು. ಇದನ್ನು ತಿಳಿದ ನ೦ತರ ಭರತನು ಬ೦ದು ಈ ಭೂಮಿಯನ್ನು ನೀನು ಗೆದ್ದು ನನಗೆ ಕೊಟ್ಟಿರುವೆ ಆದ್ದರಿ೦ದ ಮನದಲ್ಲಿ ಈ ಭಾವನೆ ತೊರೆದು ಬಿಡು ಎ೦ದು ಬೇಡಿದನು.
ನ೦ತರ ಬಾಹುಬಲಿಯು ನಿರ್ಮಲವಾದ ಮನದಿ೦ದ ತಪಸ್ಸನ್ನು ಮಾಡಿ ಕೇವಲಜ್ಞಾನ ಪಡೆದನು. ಮು೦ದೆ ಹಲವು ಕಾಲ ಧರ್ಮೋಪದೇಶವನ್ನು ಮಾಡಿ ಅ೦ತಿಮವಾಗಿ ಕೈಲಾಸಪರ್ವತದಲ್ಲಿ ಮುಕ್ತಿಯನ್ನು ಪಡೆದನು.