ಜಿ. ಶಂಕರ ಕುರುಪ್
From Wikipedia
ಜಿ. ಶಂಕರ ಕುರುಪ್ (ಜೂನ್ 3, 1901 - ಫೆಬ್ರವರಿ 2, 1978) ಮಲಯಾಳಂ ಭಾಷೆಯ ಕವಿ, ಹಾಗೂ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಲೇಖಕರು. ಇವರು "ಮಹಾಕವಿ" ಎಂಬ ಬಿರುದಿನಿಂದ ಖ್ಯಾತರಾಗಿದ್ದರು. 1965 ರಲ್ಲಿ ಇವರ "ಒದಕ್ಕೂಜಲ್" ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದಿತು. 1967 ರಲ್ಲಿ ರಷ್ಯಾ ಸರ್ಕಾರದಿಂದ ನೆಹರು ಶಾಂತಿ ಪ್ರಶಸ್ತಿ ಪಡೆದ ಇವರು 1968 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದರು.
1921 ರಿಂದ ಪ್ರೌಢ ಶಾಲಾ ಶಿಕ್ಷಕರಾಗಿದ್ದ ಕುರುಪ್, ನಂತರ ಏರ್ನಾಕುಲಂ ನ ಮಹಾರಾಜ ಕಾಲೇಜಿನ ಮಲಯಾಳಂ ಪ್ರಾಧ್ಯಾಪಕರಾಗಿ ನಿವೃತ್ತರಾದರು.
ಇವರ ಪ್ರಥಮ ಕವನ "ಪ್ರಕೃತಿಗೆ ನಮನ" ಇವರು ವಿದ್ಯಾರ್ಥಿಯಾಗಿದ್ದಾಗಲೆ ಪ್ರಕಟವಾಯಿತು. ಒಟ್ಟು 25 ಕವನ ಸಂಕಲನಗಳ ಜೊತೆಗೆ, ಗೀತನಾಟಕ ಮತ್ತು ಪ್ರಬಂಧಗಳ ಸಂಕಲನಗಳನ್ನು ಸಹ ಬರೆದಿದ್ದಾರೆ. ಇವರು ಮಲಯಾಳ ಭಾಷೆಗೆ ಭಾಷಾಂತರಿಸಿದ ಮುಖ್ಯ ಕೃತಿಗಳೆಂದರೆ ಒಮರ್ ಖಯ್ಯಾಮಾನ "ರೂಬೈಯಾತ್", ಕಾಳಿದಾಸನ "ಮೇಘದೂತ" ಮತ್ತು ನೊಬೆಲ್ ಪ್ರಶಸ್ತಿ ವಿಜೇತ "ಗೀತಾಂಜಲಿ". ಮಾನವ ಜೀವನದ ಮೇಲೆ ವಿಜ್ಞಾನದ ಪ್ರಭಾವವನ್ನು ಕುರಿತು ಅಧ್ಯಯನ ನಡೆಸಿ "ವೈಜ್ಞಾನಿಕ ಕವಿ" ಎಂದು ಹೆಸರಾದರು.
1968 ರಿಂದ 1972 ರ ವರೆಗೆ ಶಂಕರ ಕುರುಪ್ ರಾಜ್ಯಸಭೆಯ ಸದಸ್ಯರಾಗಿದ್ದರು.