ಸುಮಿತ್ರಾನಂದನ ಪಂತ್
From Wikipedia
ಸುಮಿತ್ರಾನಂದನ ಪಂತ್ (ಮೇ 20, 1900 - ಡಿಸೆಂಬರ್ 28, 1977) ಆಧುನಿಕ ಹಿಂದಿ ಕವಿಗಳಲ್ಲಿ ಪ್ರಸಿದ್ಧರು. ಹಿಂದಿ ಸಾಹಿತ್ಯದ "ಛಾಯಾವಾದಿ" ಪ್ರಕಾರದ ಪ್ರಮುಖ ಕವಿಗಳಲ್ಲಿ ಒಬ್ಬರಾಗಿ ಇವರು ಗುರುತಿಸಲ್ಪಟ್ಟಿದ್ದಾರೆ. ಕವನ ಸಂಕಲನಗಳು ಪ್ರಬಂಧಗಳು, ಗೀತನಾಟಕಗಳು - ಹೀಗೆ ಇವರು ಒಟ್ಟು 28 ಪುಸ್ತಕಗಳನ್ನು ಬರೆದರು.
ಆಲ್ಮೊರಾದ "ಕೌಸಾಣಿ" ಎಂಬ ಹಳ್ಳಿಯಲ್ಲಿ ಇವರು ಜನಿಸಿದರು. ತಾಯಿ ಇವರು ಜನಿಸಿ ಕೆಲವೇ ಗಂಟೆಗಳಲ್ಲಿ ನಿಧನರಾದರು. ಪ್ರಾಥಮಿಕ ಶಿಕ್ಷಣ ಆಲ್ಮೊರದಲ್ಲಿ ನಡೆಯಿತು. ನಂತರ ಪ್ರಯಾಗದಲ್ಲಿ ವಿದ್ಯಾಭ್ಯಾಸ ಪಡೆದರು. ಇವರ ಮೊದಲ ಹೆಸರು ಗೋಸಾಯಿಂ ದತ್ ಎಂದಿದ್ದು ನಂತರ "ಸುಮಿತ್ರಾನಂದನ ಪಂತ್" ಎಂದು ಬದಲಾಯಿಸಿಕೊಂಡರು.
ಪರ್ವತಗಳ ನಡುವೆ ಕಳೆದ ಇವರ ಬಾಲ್ಯದ ಪ್ರಭಾವ ಇವರ ನಂತರದ ಕಾವ್ಯದಲ್ಲಿ ಪ್ರಕೃತಿ ಸೌಂದರ್ಯದ ವರ್ಣನೆಯ ಮೂಲಕ ಕಂಡುಬರುತ್ತದೆ. ಮಹಾತ್ಮಾ ಗಾಂಧಿ ಅವರ ಸತ್ಯಾಗ್ರಹದ ಕರೆಗೆ ಮೆಚ್ಚಿ ವಿದ್ಯಾಭ್ಯಾಸವನ್ನು ಬಿಟ್ಟರೂ, ಬೆಂಗಾಲಿ, ಹಿಂದಿ ಮತ್ತು ಸಂಸ್ಕೃತ ಸಾಹಿತ್ಯಗಳನ್ನು ತಾವೇ ಓದಿಕೊಂಡು ಸ್ವಶಿಕ್ಷಿತರಾದರು. ನಂತರ ಪಾಂಡಿಚೆರಿಯಲ್ಲಿ ಶ್ರೀ ಅರವಿಂದರ ಆಶ್ರಮದಲ್ಲಿ ಕೆಲ ಕಾಲ ಕಳೆದರು.
ಛಾಯಾವಾದಿ ಪ್ರಕಾರವಷ್ಟೇ ಅಲ್ಲದೇ, ಅರವಿಂದರ ಬೋಧನೆಗಳಿಂದ ಪ್ರೇರಿತರಾಗಿ ಪ್ರಗತೀಪರ ಹಾಗೂ ಮಾನವತಾವಾದಿ ಕವನಗಳನ್ನು ಸಹ ಬರೆದಿದ್ದಾರೆ.
ಇವರ ಪ್ರಸಿದ್ಧ ಕವನ ಸಂಕಲನ "ಚಿದಂಬರಾ" ಜ್ಞಾನಪೀಠ ಪ್ರಶಸ್ತಿ ಪಡೆದಿದೆ. ರಷ್ಯದ ಸರ್ಕಾರ ಇವರ ಸಂಕಲನ "ಲೋಕಯಾತನ್" ಗೆ "ನೆಹರು ಶಾಂತಿ ಪ್ರಶಸ್ತಿ" ನೀಡಿದೆ.