ಧ್ಯಾನ್ ಚಂದ್
From Wikipedia
ಮೇಜರ್ ಧ್ಯಾನ್ ಚಂದ್ ಸಿಂಗ್ ಭಾರತವಷ್ಟೇ ಅಲ್ಲ, ಪ್ರಪಂಚದಲ್ಲಿಯೇ ಅತ್ಯಂತ ಶ್ರೇಷ್ಠ ಹಾಕಿ ಪಟು. ಇಡೀ ಪ್ರಪಂಚದಲ್ಲಿಯೇ ಇಲ್ಲಿಯವರೆಗೆ ಇವರನ್ನು ಸರಿಗಟ್ಟುವ ಯಾವ ಆಟಗಾರನೂ ಇಲ್ಲ ಎಂಬುದು ಅಚ್ಚರಿಯ ಸಂಗತಿ. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ನನ್ನು ಬೆರಗುಗೊಳಿಸಿದ ಕ್ರೀಡಾ ಮಾಂತ್ರಿಕ. ಭಾರತ ಸರ್ಕಾರವು ಇವರಿಗೆ 'ಪದ್ಮ ವಿಭೂಷಣ' ಪ್ರಶಸ್ತಿಯನ್ನು ನೀಡಿದೆ. ದಾದಾ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಿದ್ದ 'ಧ್ಯಾನ್' ವರನ್ನು ಅವರ ಕೋಚ್ 'ಪಂಕಜ್ ಗುಪ್ತ' ಅವರು 'ಚಾಂದ್' (ಚಂದ್ರ) ಎಂದು ಕರೆಯುತ್ತಿದ್ಧರು. ಅಲ್ಲದೇ ತಮ್ಮ ಶಿಷ್ಯ ಚಂದ್ರನಂತೆ ಬೆಳಗುತ್ತಾನೆ ಎಂದೂ ಭವಿಷ್ಯ ನುಡಿದಿದ್ದರು.
ಉತ್ತರ ಪ್ರದೇಶ ದ ಪ್ರಯಾಗ್ ನಲ್ಲಿ ರಜಪೂತ್ ಕುಟುಂಬವೊಂದರಲ್ಲಿ ಆಗಸ್ಟ್ ೨೯ ೧೯೦೫ರಲ್ಲಿ ಧ್ಯಾನ್ ಚಂದ್ ಜನಿಸಿದರು. ಅವರ ತಂದೆ ಭಾರತೀಯ ಬ್ರಿಟೀಶ್ ಸೈನ್ಯದಲ್ಲಿ ಹವಾಲ್ದಾರ್ ಅಗಿದ್ದರು. ಪ್ರಯಾಗದಿಂದ ತದನಂತರ ಕುಟುಂಬವು 'ಝಾನ್ಸಿ' ನಗರಕ್ಕೆ ವಲಸೆ ಬಂದಿತು. ಇಲ್ಲಿಯೇ ಇವರ ಕ್ರೀಡಾ ದಿನಗಳು ಪ್ರಾರಂಭವಾದುವು. ೧೬ನೇ ವಯಸ್ಸಿನಲ್ಲಿ ವಿಧ್ಯಾಭ್ಯಾಸ ಮುಗಿಸಿ ಭಾರತೀಯ ಸೈನ್ಯದಲ್ಲಿ ಸಿಪಾಯಿ ಯಾಗಿ ೧೪ನೇ ಪಂಜಾಬ್ ರೆಜಿಮೆಂಟ್ ಸೇರಿದ ಧ್ಯಾನ್ ನನ್ನು ಸುಬೇದಾರ್-ಮೇಜರ್ ಭೋಲೆ ತಿವಾರಿಯವರು ಗಮನಿಸಿ ಪ್ರೋತ್ಸಾಹಿಸಿದರು.
೧೯೨೮ರಲ್ಲಿ ಭಾರತೀಯ ಹಾಕೀ ತಂಡವನ್ನು ಸೇರಿದ ಧ್ಯಾನ್ ಚಂದ್ ಅವರಿಗೆ, ನೆದರ್ ಲ್ಯಾಂಡ್ ನ ಆಮ್ ಸ್ಟೆರ್ ಡ್ಯಾಮ್ ನಲ್ಲಿ ಆಯೋಜಿಸಲಾದ ೧೯೨೮ರ ಬೇಸಗೆಯ ಒಲಂಪಿಕ್ ನಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ೩-೦ ಗೋಲ್ ಗಳಲ್ಲಿ ೨ ನ್ನು ಗಳಿಸುವ ಮೊಲಕ ಭಾರತೀಯ ತಂಡಕ್ಕೆ ನೆದರ್ ಲ್ಯಾಂಡನ್ನು ಸೋಲಿಸಲು ಸಹಾಯ ಮಾಡಿದ ಧ್ಯಾನ್ ಚಂದರ ಆಟಕ್ಕೇ ನೆರೆದ ಜನರು ಬೆರಗಾದರು. ಈ ಸರಣಿಯಲ್ಲಿ ಭಾರತೀಯ ಹಾಕಿ ತಂಡಕ್ಕೆ ಒಲಂಪಿಕ್ ಸ್ವರ್ಣ ಪದಕವು ದೊರೆತಿತು. ಧ್ಯಾನ್ ಹಂದ್ ೧೯೩೨ ಹಾಗು ೧೯೩೬ ರಲ್ಲಿ ನೆಡದ ಒಲಂಪಿಕ್ಸ್ ಗಳಲ್ಲಿ ಸ್ವರ್ಣ ಪದಕ ಪಡೆದ ಭಾರತದ ತಂಡದ ಸದಸ್ಯರಾಗಿದ್ದರು. ಎರಡನೆ ವಿಶ್ವಯುದ್ದ ಮುಗಿದ ಬಳಿಕವು ಕೆಲಕಾಲ ಆಡಿದ ಧ್ಯಾನ್ ಚಂದ್ ೧೯೪೮ರಲ್ಲಿ ತಮ್ಮ ೪೨ನೆ ವಯಸ್ಸಿನಲ್ಲಿ ಹಾಕಿ ಆಟದಿಂದ ನಿವೃತ್ತರಾದರು. ಧ್ಯಾನ್ ಚಂದರ ಸಹೊದರ ರೂಪ್ ಸಿಂಗ್ ಕೂಡ ಉತ್ತಮ ಆಟಗಾರರಾಗಿದ್ದರು. ಧ್ಯಾನ್ ಚಂದರ ಪುತ್ರ ಅಶೋಕ್ ಕುಮಾರ್ ಕೂಡ ಹಾಕಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಧ್ಯಾನ್ ಚಂದ್ ಜನ್ಮದಿನ ೨೯ ಆಗಸ್ಟನ್ನು ಭಾರತದಲ್ಲಿ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ. ೧೯೭೯ರ ಡಿಸಂಬರ್ ೩ರೊಂದು ಧ್ಯಾನ್ ಚಂದ್ ಸ್ವರ್ಗಸ್ಥರಾದರು.